ಇಂಫಾಲ್ : ರಾಜ್ಯದ ಜನಾಂಗೀಯ ಗಲಭೆಯಲ್ಲಿ ಸಂತ್ರಸ್ತರಾಗಿ ಪರಿಹಾರ ಶಿಬಿರಗಳಲ್ಲಿ ನೆಲೆಸಿರುವವರಿಗೆ ಒಂದು ಸಾವಿರ ರೂಪಾಯಿ ನೆರವು ನೀಡಲಾಗುವುದು ಎಂದು ಮಣಿಪುರದ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಮಂಗಳವಾರ ಹೇಳಿದ್ದಾರೆ.
ಇಂಫಾಲ್ ಪೂರ್ವ ಜಿಲ್ಲೆಯ ಖುಮಾನ್ ಲಂಪಾಕ್ ಕ್ರೀಡಾಸಂಕೀರ್ಣದಲ್ಲಿ 106 ಮಹಿಳೆಯರು ಮತ್ತು ಮಕ್ಕಳು ತಂಗಿರುವ ಪರಿಹಾರ ಶಿಬಿರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿರೆನ್ ಸಿಂಗ್, ಶಿಬಿರಗಳಲ್ಲಿರುವ ಸಂತ್ರಸ್ತರಿಗೆ ಬಟ್ಟೆ ಮತ್ತಿತರ ವೈಯಕ್ತಿಕ ಅಗತ್ಯವಾದ ವಸ್ತುಗಳನ್ನು ಖರೀದಿಸುವ ಸಲುವಾಗಿ ಒಂದು ಸಾವಿರ ರೂಪಾಯಿ ಹಣದ ನೆರವು ನೀಡಲಾಗುವುದು.
ಪಶ್ಚಿಮ ಇಂಫಾಲ್ ಜಿಲ್ಲೆಯ ಲ್ಯಾಂಪೆಲ್ಪಟ್ ಪರಿಹಾರ ಶಿಬಿರಕ್ಕೂ ಭೇಟಿ ನೀಡಿದ ಬಿರೆನ್ ಸಿಂಗ್ ಅಲ್ಲಿನ ಜನರೊಂದಿಗೆ ಸಂವಾದ ನಡೆಸಿದರು.
'ಸಂತ್ರಸ್ತರಿಗೆ ನೆರವು ನೀಡಲು ಹಾಗೂ ಅವರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸ್ಥಳಾಂತರ ಗೊಂಡ ವ್ಯಕ್ತಿಗಳಿಗೆ ಪರಿಹಾರ ಮತ್ತು ಪುನರ್‌ವಸತಿ ಒದಗಿಸಲು ನಡೆಯುತ್ತಿರುವ ಕ್ರಮಗಳ ಭಾಗವಾಗಿ ಆರ್ಥಿಕ ನೆರವು ಮತ್ತು ಸಹಾಯವನ್ನು ವಿಸ್ತರಿಸಲಾಗಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮಣಿಪುರದಲ್ಲಿ ಹಿಂಸಾಚಾರ ಆರಂಭವಾದಾಗಿನಿಂದ ಇದುವರೆಗೆ 300 ಪರಿಹಾರ ಶಿಬಿರಗಳಲ್ಲಿ ಸುಮಾರು 50 ಸಾವಿರ ಜನರು ನೆಲೆಸಿದ್ದಾರೆ.
ನವದೆಹಲಿಯಲ್ಲಿ ಭಾನುವಾರ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ರಾಜ್ಯದ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಮಣಿಪುರದಲ್ಲಿ ಶಾಂತಿ ನೆಲೆಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಕೇಂದ್ರವು ದಿನದ 24 ಗಂಟೆಯೂ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ಉಗ್ರರು ದಾಳಿ ಮಾಡಬಹುದಾದ ಸ್ಥಳಗಳಲ್ಲಿ ಸುಮಾರು 40 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ' ಎಂದೂ ಅವರು ಹೇಳಿದ್ದಾರೆ.