ತಿರುವನಂತಪುರಂ: ಕೇರಳಕ್ಕೆ ನೂತನ ಮುಖ್ಯ ಕಾರ್ಯದರ್ಶಿ ಹಾಗೂ ನೂತನ ಪೋಲೀಸ್ ಮುಖ್ಯಸ್ಥರನ್ನು ಆಯ್ಕೆಗೊಳಿಸಿ ಘೋಷಿಸಲಾಗಿದೆ. ಡಾ.ವಿ.ವೇಣು ಮುಖ್ಯ ಕಾರ್ಯದರ್ಶಿಯಾಗಿ ಮತ್ತು ಶೇಖ್ ದರ್ವೇಜ್ ಸಾಹಿಬ್ ಪೋಲೀಸ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯ ಕಾರ್ಯದರ್ಶಿ ವಿಪಿ ಜಾಯ್ ಮತ್ತು ರಾಜ್ಯ ಪೋಲೀಸ್ ಮುಖ್ಯಸ್ಥ ಅನಿಲಕಾಂತ್ ಅವರು ಈ ತಿಂಗಳಾಂತ್ಯ ನಿವೃತ್ತಿಯಾಗುತ್ತಿದ್ದು, ಎರಡು ಹುದ್ದೆಗಳಿಗೆ ನೇಮಕಾತಿ ನಡೆದಿದೆ.
ವಿ. ವೇಣು ಅವರು ಈ ಮೊದಲು ಗೃಹ ಕಾರ್ಯದರ್ಶಿ ಹುದ್ದೆಯಲ್ಲಿದ್ದರು. ವಿ.ಪಿ.ಜಾಯ್ ಅವರ ಉತ್ತರಾಧಿಕಾರಿಯಾಗಿ ವಿ.ವೇಣು ಅವರು ಆಯ್ಕೆಯಾಗುತ್ತಾರೆ ಎಂಬ ಸಾಮಾನ್ಯ ಒಮ್ಮತವಿತ್ತು. ವೇಣು ಅವರಿಗಿಂತ ಹಿರಿಯ ಇಬ್ಬರು ಅಧಿಕಾರಿಗಳು ಕೇಂದ್ರ ಸೇವೆಯಿಂದ ರಾಜ್ಯ ಸೇವೆಗೆ ಹಿಂತಿರುಗುವುದಿಲ್ಲ ಎಂದು ತಿಳಿಸಿದ್ದರು. ಹೀಗಾಗಿ ವೇಣು ಮುಖ್ಯ ಕಾರ್ಯದರ್ಶಿಯಾಗುವುದು ಖಚಿತವಾಗಿತ್ತು.
ಆದರೆ ಶೇಖ್ ದರ್ವೇಜ್ ಸಾಹಿಬ್ ನೇಮಕಾತಿ ಅನಿರೀಕ್ಷಿತವಾದದ್ದಾಗಿದೆ. ಅವರು ಪ್ರಸ್ತುತ ಅಗ್ನಿಶಾಮಕ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೈಲು ಅಧೀಕ್ಷಕ ಕೆ ಪದ್ಮಕುಮಾರ್ ಮತ್ತು ಶೇಖ್ ದರ್ವೇಜ್ ಸಾಹಿಬ್ ಸಾಧ್ಯತೆಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದರು. ಇಬ್ಬರೂ ಎಡ ಸರ್ಕಾರದ ನೆಚ್ಚಿನ ಅಧಿಕಾರಿಗಳು. ಶೇಖ್ ದರ್ವೇಜ್ ಸಾಹಿಬ್ ಅವರು ವಿವಾದಗಳಿಂದ ಮುಕ್ತವಾಗಿದ್ದರಿಂದ ಅವರನ್ನೇ ನೇಮಕ ಮಾಡಲಾಗಿದೆ.