ಬಂಕುರಾ :ಪಶ್ಚಿಮ ಬಂಗಾಳದ ಬಂಕುರಾ ಬಳಿ ಈ ದುರ್ಘಟನೆ ಸಂಭವಿಸಿದ್ದು, ಒಂದು ಗೂಡ್ಸ್ ರೈಲು ಇನ್ನೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೋಗಿಗಳು ಹಳಿ ತಪ್ಪಿವೆ.
ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಹಳಿ ತಪ್ಪಿದ ಪರಿಣಾಮ ಗೂಡ್ಸ್ ರೈಲು ಮತ್ತೊಂದಕ್ಕೆ ದಿಕ್ಕಿ ಹೊಡೆದಿದೆ. ಪರಿಣಾಮ ಡಿಕ್ಕಿ ಹೊಡೆದ ರೈಲಿನ 12 ಬೋಗಿಗಳು ಹಳಿ ತಪ್ಪಿ ಬಿದ್ದಿವೆ.
ಬಂಕುರಾ ಬಳಿಯ ಖಾರಾಗ್ ಪುರ್-ಬಂಕುರಾ ಆದ್ರ ರೈಲು ಮಾರ್ಗದ ಓಂಡಾ ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದ್ದು, ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.
ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ರೈಲಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆತನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.ತಿಳಿದು ಬಂದ ಮಾಹಿತಿ ಪ್ರಕಾರ, ಎರಡೂ ಗೂಡ್ಸ್ ರೈಲುಗಳು ಖಾಲಿಯಾಗಿದ್ದವು. ಎರಡು ರೈಲುಗಳ ಮಧ್ಯೆ ಅಪಘಾತ ಸಂಭವಿಸಲು ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ.ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೆ ವಿಭಾಗದ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ರೈಲ್ವೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜೂನ್ 2ರಂದು ಒಡಿಶಾದ ಬಾಲಸೋರ್‌ನಲ್ಲಿ ಮೂರು ರೈಲುಗಳ ಮಧ್ಯೆ ನಡೆದ ಅಪಘಾತದಿಂದ ಕನಿಷ್ಠ 280 ಮಂದಿ ಸಾವನ್ನಪ್ಪಿ ನೂರಾರು ಮಂದಿ ಗಾಯಗೊಂಡಿದ್ದರು.ಬಾಲಸೋರ್‌ನಲ್ಲಿ ನಡೆದ ಭೀಕರ ರೈಲು ದುರಂತದ ಭಯಾನಕ ದೃಶ್ಯ ಮಾಸುವ ಮುನ್ನವೇ ಪಶ್ಚಿಮ ಬಂಗಾಳದಲ್ಲಿ ಇಂತಹದೇ ಘಟನೆ ನಡೆದಿರೋದು ಜನರಲ್ಲಿ ಆತಂಕ ಹೆಚ್ಚಿಸಿದೆ.