ಡೆಹ್ರಾಡೂನ್: ಎರಡು ವರ್ಷಗಳಲ್ಲಿ ಕ್ರೀಡಾ ತರಬೇತಿಯನ್ನು ಪಡೆದು 200 ಪದಕ ಗೆದ್ದು, 106 ವರ್ಷದ ಅಜ್ಜಿಯೊಬ್ಬರು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಇತ್ತೀಚಿಗೆ ಡೆಹ್ರಾಡೂನ್‌ನಲ್ಲಿ ನಡೆದ 18ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟ, 200 ಮೀಟರ್ ಓಟ ಮತ್ತು ಶಾಟ್‌ಪುಟ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿರು ಹರಿಯಾಣದ ರಾಮ್ಬಾಯಿ, 106ನೇ ವಯಸ್ಸಿನಲ್ಲಿ ತನ್ನ ಪ್ರದರ್ಶನದ ಮೂಲಕ ಮಿಂಚು ಹರಿಸಿ ತಮ್ಮ ಇಳಿಯವಸ್ಸಿನಲ್ಲಿಯೂ 100 ಮೀಟರ್ ಓಟವನ್ನು ಕೇವಲ 45.40 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ರಾಮ್ಬಾಯಿಯ ಹಿನ್ನಲೆ:
ರಾಮ್ಬಾಯಿ ಹರಿಯಾಣದ ಚರ್ಕಿ ದಾದ್ರಿ ಜಿಲ್ಲೆಯ ಕದ್ಮಾ ಗ್ರಾಮದ ನಿವಾಸಿಯಾಗಿದ್ದು, ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಅಂದರೆ 1917ರಲ್ಲಿ ಜನಿಸಿದರು. ಈ ಅಜ್ಜಿಯ ಮೊಮ್ಮಗಳು ಶರ್ಮಿಳಾ ಸಾಂಗ್ವಾನ್ ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿದ್ದಾರೆ.2016ರಲ್ಲಿ ಪಂಜಾಬ್‌ನ ಮನ್ ಕೌರ್ 100ನೇ ವಯಸ್ಸಿನಲ್ಲಿ ವ್ಯಾಂಕೋವರ್‌ನಲ್ಲಿ ನಡೆದ ಅಮೇರಿಕನ್ ಮಾಸ್ಟರ್ಸ್ ಗೇಮ್‌ನಲ್ಲಿ 1 ನಿಮಿಷ ಮತ್ತು 21 ಸೆಕೆಂಡ್‌ಗಳಲ್ಲಿ 100 ಎಮ್‌ಎಸ್‌ಪ್ರಿಂಟ್‌ನಲ್ಲಿ ಚಿನ್ನ ಗೆದ್ದ ವಿಶ್ವದ ಅತ್ಯಂತ ವೇಗದ ಶತಾಯುಷಿಯಾಗುವ ಕಥೆಯನ್ನು ಸ್ಪೂರ್ತಿಯಾಗಿ ತೆಗೆದುಕೊಂಡ ರಾಮ್ಬಾಯಿ ಕೇವಲ ಎರಡು ವರ್ಷಗಳ ಹಿಂದೆ 104ನೇ ವಯಸ್ಸಿನಲ್ಲಿ ಓಡಲು ಪ್ರಾರಂಭಿಸಿದರು. ಶರ್ಮಿಳಾ ತನ್ನ ಅಜ್ಜಿಯ ಓಟವನ್ನು ಕಂಡು ಬೆರಗಾಗಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೇರೇಪಿಸಿದರು.
ಇದರಿಂದಾಗಿ ಅಜ್ಜಿ, ಗುಜರಾತ್‌ನ ವಡೋದರದಲ್ಲಿ ನಡೆದ ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಮೊದಲ ಪ್ರದರ್ಶನದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದರು. ಇದಾದ ನಂತರ ರಾಮ್ಬಾಯಿ ಸದ್ಯ ಪ್ರತಿ ಸ್ಪರ್ಧೆಯಲ್ಲೂ ಭಾಗವಹಿಸುತ್ತಿದ್ದು, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಆಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಮ್ಬಾಯಿ ಜತೆಗೆ ಅವರ ಮಗಳು ಸಂತ್ರಾ ದೇವಿ(70), ಮತ್ತು ಮೊಮ್ಮಗಳು ಶರ್ಮಿಳಾ(42) ಸಹ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ.ಇವರ ಕುಟುಂಬದ ಮೂರು ತಲೆಮಾರುಗಳು ಅಂದರೆ ಅಜ್ಜಿ, ಮಗಳು ಮತ್ತು ಮೊಮ್ಮಗಳು ಒಟ್ಟಿಗೆ ಟ್ರ್ಯಾಕ್‌ನಲ್ಲಿ ಇಳಿದುದನ್ನು ನೋಡಿ ಕೆಲವರು ಬೆಚ್ಚಿಬಿದ್ದಿದ್ದಾರೆ. ಪ್ರತಿ ತಿಂಗಳು ಈ ಮೂವರು ಯಾವುದಾದರೂ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. 2 ವರ್ಷಗಳ ಹಿಂದೆ ಕ್ರೀಡೆಯಲ್ಲಿ ತೊಡಗಿರುವ ಅಜ್ಜಿ 200 ಪದಕ ಗೆದ್ದಿದ್ದಾಳೆ.
ಇದೇ ಅಜ್ಜಿಯ ಶಕ್ತಿಯ ಗುಟ್ಟು:
ಫಿಟ್ ಆಗಿರಲು ಪ್ರತಿನಿತ್ಯ 5 ಕಿಲೋಮೀಟರ್ ಓಡುವ ರಾಮ್ಬಾಯಿ ಶುದ್ಧ ಸಸ್ಯಾಹಾರಿ ಆಹಾರ ಸೇವಿಸುತ್ತಾರೆ. ನಿತ್ಯ 250 ಗ್ರಾಂ ದೇಸಿ ತುಪ್ಪ ಹಾಗೂ ಅರ್ಧ ಕಿಲೋ ಮೊಸರು ಸೇವಿಸುತ್ತಾರೆ. ತುಪ್ಪದ ತಯಾರಿಸಿದ ಆಹಾರವನ್ನು ತಿನ್ನುವುದರ ಜತೆಗೆ ದಿನಕ್ಕೆ ಎರಡು ಬಾರಿ 500 ಮಿ.ಲೀ. ಹಾಲು ಕುಡಿಯುತ್ತಾರೆ. ಇದಲ್ಲದೇ ಬೆಳಗಿನ ತಿಂಡಿಯಲ್ಲಿ ಹಾಲು-ಹಣ್ಣು ತಿನ್ನುತ್ತಾಳೆ. ರಾತ್ರಿ 9 ಗಂಟೆಗೆ ಮಲಗುವ ರಾಮ್ಬಾಯಿ ಪ್ರತಿದಿನ ಬೆಳಿಗ್ಗೆ ಸೂರ್ಯ ಉದಯಿಸುವ ಮೊದಲು ಎದ್ದೇಳುತ್ತಾಳೆ.