ಬಹನಾಗ: ಫೂಲಮಣಿ ಹೆಂಬ್ರುಮ್ ತನ್ನ ಮನೆಯ ಅಂಗಳದಲ್ಲಿ ಅಡುಗೆ ಮಾಡುತ್ತಿದ್ದಾಗ ಕಳೆದ ಶುಕ್ರವಾರ ಸಂಜೆ ಒಂದು ದೊಡ್ಡ ಶಬ್ದ ಕೇಳಿಸಿತು. ತಕ್ಷಣ ಫೂಲಮಣಿ ಮತ್ತು ಅವಳ ಪತಿ ರಘು ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ರೈಲ್ವೆ ಹಳಿಗಳತ್ತ ಹೋಗಿ ನೋಡಿದರೆ ಭೀಕರ ರೈಲು ಅಪಘಾತ ಸಂಭವಿಸಿತ್ತು.
"ನನ್ನ ಜೀವನದಲ್ಲಿ ಮೊದಲ ಬಾರಿಗೆ, ನಾನು ಅನೇಕ ಸತ್ತ ಜನರನ್ನು ನೋಡಿದೆ. ದೇಹಗಳು ರಕ್ತದಲ್ಲಿ ಮುಳುಗಿದ್ದವು. ಛಿದ್ರಗೊಂಡ ದೇಹದ ಭಾಗಗಳು ಅಲ್ಲಲ್ಲಿ ಹರಡಿಕೊಂಡಿದ್ದವು. ನಾನು ಧೈರ್ಯ ಮಾಡಿ ಹಳಿತಪ್ಪಿದ ಕೋಚ್ ಕಡೆಗೆ ಓಡಿದೆ. ಅಲ್ಲಿ ಚಿಕ್ಕ ಹುಡುಗಿ ಕಿಟಕಿಯಿಂದ ನೇತಾಡುತ್ತಿದ್ದಳು. ಆಕೆಯ ದೇಹದಾದ್ಯಂತ ಗಾಯಗಳಾಗಿದ್ದವು. ಆಕೆಯ ತಾಯಿ ಹೊರಬರುವಲ್ಲಿ ಯಶಸ್ವಿಯಾದರು. ನಾನು ಅವರನ್ನು ನನ್ನ ಮನೆಗೆ ಕರೆದೊಯ್ದು ನೀರು ಕೊಟ್ಟೆ” ಎಂದು ಆರು ಮಕ್ಕಳನ್ನು ರಕ್ಷಿಸಿದ 30 ವರ್ಷದ ಬುಡಕಟ್ಟು ಮಹಿಳೆ ಹೇಳಿದ್ದಾರೆ.
ಹೆಂಬ್ರೂಮ್ ದಂಪತಿಗಳ ಸಹಾಯ ಅಲ್ಲಿಗೆ ನಿಲ್ಲಲಿಲ್ಲ. ಅವರು ಇನ್ನೂ 30 ಪ್ರಯಾಣಿಕರನ್ನು ರಕ್ಷಿಸಲು ಹೋದರು ಮತ್ತು ಆಸ್ಪತ್ರೆಗಳಿಗೆ ದಾಖಲಿಸಲು ಸಾರಿಗೆ ವ್ಯವಸ್ಥೆ ಮಾಡಿದರು. ರಕ್ಷಣಾ ತಂಡಗಳು ಆಗಮಿಸುವ ಮೊದಲು, ಕೃಷ್ಣಾಪುರ ಮತ್ತು ಕಮರಿಪುರದ ಎರಡು ಕುಗ್ರಾಮಗಳ ಸುಮಾರು 58 ಬುಡಕಟ್ಟು ಜನಾಂಗದವರು ತಮ್ಮಲ್ಲಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ಬಹನಾಗದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸಿಲುಕಿದ ಸುಮಾರು 200 ಪ್ರಯಾಣಿಕರ ಜೀವ ಉಳಿಸಿದ್ದಾರೆ.
ಆದಿವಾಸಿಗಳು ಸುಮಾರು 200 ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿದ್ದಾರೆ ಮತ್ತು ಹಾನಿಗೊಳಗಾದ ಬೋಗಿಗಳಿಂದ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ನಂತರ ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ, ಅಗ್ನಿಶಾಮಕ ಸೇವೆಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಗಳು ಸ್ಥಳಕ್ಕೆ ಆಗಮಿಸಿದವ ಎಂದು ಮತ್ತೊಬ್ಬ ಬುಡಕಟ್ಟು ಜನಾಂಗದ ಮಹೇಶ್ವರ್ ಕಿಸ್ಕು ನೆನಪಿಸಿಕೊಂಡಿದ್ದಾರೆ.
“ನಾನು ಉರುಳಿಬಿದ್ದ ಕೋಚ್‌ಗಳ ಮೇಲೆ ಹತ್ತಿ ಕೈ ಮತ್ತು ಕಾಲುಗಳನ್ನು ಕಳೆದುಕೊಂಡಿದ್ದ ಮೃತ ದೇಹಗಳನ್ನು ಹೊರತೆಗೆದಿದ್ದೇನೆ. ಆ ದೃಶ್ಯ ತುಂಬಾ ಭಯಾನಕವಾಗಿತ್ತು. ಘಟನೆ ನಡೆದು ಎರಡು ದಿನಗಳಾದರೂ ಅದು ನನ್ನ ಕಣ್ಣು ಮುಂದೆ ಬರುತ್ತಿದೆ” ಎಂದು ಅವರು ಹೇಳಿದ್ದಾರೆ.
ಬುಡಕಟ್ಟು ಕುಟುಂಬಗಳು ರೈಲು ಹಳಿತಪ್ಪಿದ ಸ್ಥಳದಿಂದ ಕೇವಲ 200 ಮೀಟರ್ ದೂರದಲ್ಲಿ ವಾಸಿಸುತ್ತಿವೆ. ಅದೃಷ್ಟವಶಾತ್ ಅವರ ಮನೆಗಳಿಗೆ ರೈಲು ಅಪ್ಪಳಿಸಿಲ್ಲ. ನಾವು ಅದೃಷ್ಟವಂತರು ಎಂದು ಅವರ ಪತ್ನಿ ಮಂಜುಲತಾ ತಿಳಿಸಿದ್ದಾರೆ.