ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗೂಡುವ ಸಂಬಂಧ ಚರ್ಚಿಸಲು ಇದೇ 23ರಂದು ಬಿಹಾರದ ಪಟ್ನಾದಲ್ಲಿ ನಿಗದಿಯಾಗಿರುವ ಸಭೆಗೂ ಮುನ್ನವೇ ಒಗ್ಗಟ್ಟು ಪ್ರದರ್ಶನದ ಬಗ್ಗೆ ಪ್ರತಿಪಕ್ಷಗಳ ನಡುವಣ ಅಪಸ್ವರ ಶುರುವಾಗಿದೆ.
ತೃಣಮೂಲ ಕಾಂಗ್ರೆಸ್, ಎಎಪಿ ಮತ್ತು ಸಮಾಜವಾದಿ ಪಕ್ಷವು ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ಸೆಣಸಲು ಉತ್ಸುಕವಾಗಿವೆ. ಶೀಘ್ರವೇ ವಿಪಕ್ಷಗಳ ನಡುವೆ ಒಗ್ಗಟ್ಟು ಬಲಗೊಂಡರೆ ಮುಂಬರುವ ಛತ್ತೀಸಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟವು ಉತ್ತಮ ಸಾಧನೆ ತೋರಬಹುದು ಎಂಬುದು ಆ ಪಕ್ಷಗಳ ಲೆಕ್ಕಾಚಾರ.
ಆದರೆ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿರುವ ಕಾಂಗ್ರೆಸ್, ಈ ನಾಲ್ಕು ರಾಜ್ಯಗಳ ಚುನಾವಣೆ ಪೂರ್ಣಗೊಳ್ಳುವವರೆಗೂ ಯಾವುದೇ ನಿರ್ಣಯ ಪ್ರಕಟಿಸದಿರಲು ನಿರ್ಧರಿಸಿದೆ. ಹಾಗಾಗಿ, ಸಭೆಯಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿಗೆ ಸಹಮತ ಸೂಚಿಸದೆ ಕಾದು ನೋಡುವ ತಂತ್ರ ಅನುಸರಿಸಲು ಮುಂದಾಗಿದೆ.
ಪ್ರತಿಪಕ್ಷವಾಗಿದ್ದುಕೊಂಡೇ ವರ್ಷಾಂತ್ಯದಲ್ಲಿ ನಾಲ್ಕು ರಾಜ್ಯಗಳಲ್ಲಿ ನಡೆಯುವ ಚುನಾವಣೆಯಲ್ಲಿ ತನ್ನ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಿಕೊಳ್ಳುವ ಉತ್ಸಾಹದಲ್ಲಿ ಕಾಂಗ್ರೆಸ್ ವರಿಷ್ಠರಿದ್ದಾರೆ.
ಪಟ್ನಾ ಸಭೆಗೆ ಇನ್ನೂ ನಾಲ್ಕು ದಿನಗಳಷ್ಟೇ ಬಾಕಿ ಉಳಿದಿದ್ದು, ಪ್ರತಿಪಕ್ಷಗಳ ತಂತ್ರಗಾರಿಕೆಯೂ ಬಹಿರಂಗಗೊಂಡಿದೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್ ಸ್ಪರ್ಧಿಸುವುದಿಲ್ಲವೆಂದು ಭರವಸೆ ನೀಡಿದರಷ್ಟೇ ಮಧ್ಯಪ್ರದೇಶ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಈಗಾಗಲೇ ಎಎಪಿ ಸ್ಪಷ್ಟಪಡಿಸಿದೆ. ಮತ್ತೊಂದೆಡೆ ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಜೊತೆಗೆ ಕಾಂಗ್ರೆಸ್ ಮೈತ್ರಿ ಮುಂದುವರಿಸಿದರೆ ರಾಷ್ಟ್ರಮಟ್ಟದಲ್ಲಿ ಆ ಪಕ್ಷಕ್ಕೆ ನಮ್ಮ ಬೆಂಬಲ ನೀಡುವುದಿಲ್ಲ ಎಂದು ಟಿಎಂಸಿ ಹೇಳಿದೆ.
ಮಮತಾ ಬ್ಯಾನರ್ಜಿ ಅವರ ಈ ನಿಲುವಿಗೆ ಕೈ ಪಾಳಯದ ನಾಯಕರು ಸಹಮತ ಸೂಚಿಸಿಲ್ಲ. 'ನಾವು ರಾಜಕೀಯದಿಂದ ಸ್ವಯಂ ನಿವೃತ್ತಿ ಪಡೆದಿಲ್ಲ. ಬಿಜೆಪಿಯೇತರ ಪಕ್ಷಗಳು ನಮ್ಮನ್ನು ಸುಮ್ಮನಿರುವಂತೆ ಹೇಳುತ್ತಿವೆ. ಆದರೆ, ನಾವು ಪಶ್ಚಿಮ ಬಂಗಾಳದಲ್ಲಿ ಸಕ್ರಿಯವಾಗಿದ್ದೇವೆ' ಎನ್ನುತ್ತಾರೆ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು.
'ದೆಹಲಿ, ಪಂಜಾಬ್, ಪಶ್ಚಿಮ ಬಂಗಾಳದಲ್ಲಿ ಹಲವು ವರ್ಷಗಳಿಂದ ಪಕ್ಷ ಅಸ್ತಿತ್ವದಲ್ಲಿದೆ. ಗೋವಾ ಮತ್ತು ಗುಜರಾತ್‌ನಲ್ಲಿ ಎಎಪಿ ಮತ್ತು ಟಿಎಂಸಿಗೆ ಅಸ್ತಿತ್ವವೇ ಇಲ್ಲ. ಆದರೂ, ಅಲ್ಲಿ ನಮ್ಮ ವಿರುದ್ಧವೇ ಆ ಪಕ್ಷಗಳು ಕಣಕ್ಕಿಳಿದವು. ಕಾಂಗ್ರೆಸ್ ವರ್ಚಸ್ಸಿಗೆ ಧಕ್ಕೆ ತಂದು ನಮ್ಮ ಮತಗಳನ್ನು ಸೆಳೆಯುವುದಷ್ಟೇ ಅವರ ಉದ್ದೇಶ' ಎಂಬುದು ಅವರ ಅಭಿಪ್ರಾಯ.
ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ದೆಹಲಿಯನ್ನು ಮಿತ್ರ ಪಕ್ಷಗಳಿಗೆ ಬಿಟ್ಟುಕೊಡುವಂತೆ ಸಭೆಯಲ್ಲಿ ಮಮತಾ ಅವರು, ಕಾಂಗ್ರೆಸ್ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ. ಕಾಂಗ್ರೆಸ್ ಮುಸ್ಲಿಂ ಮತದಾರರನ್ನು ನೆಚ್ಚಿಕೊಂಡಿದೆ. ಹಾಗಾಗಿ, ಆ ರಾಜ್ಯಗಳಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್ ಪಾಲಾಗುತ್ತವೆ ಎಂಬುದು ಅವರ ಆತಂಕಕ್ಕೆ ಮೂಲ ಕಾರಣವಾಗಿದೆ.
ಕರ್ನಾಟಕದ ಚುನಾವಣೆಯಲ್ಲಿ ಮುಸ್ಲಿಂ ಮತಗಳನ್ನು ಸೆಳೆಯುವಲ್ಲಿ 'ಕೈ' ಪಡೆ ಯಶಸ್ವಿಯಾಗಿದೆ. ಅಲ್ಲದೇ, ಅಲ್ಪಸಂಖ್ಯಾತರ ಪ್ರಾಬಲ್ಯವಿದ್ದ ಪಶ್ಚಿಮ ಬಂಗಾಳದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ. ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಗುಜರಾತ್ ಮತ್ತು ದೆಹಲಿಯಲ್ಲಿ ಎಎಪಿ ರೂಪಿಸಿದ ತಂತ್ರವೂ ಫಲಿಸಿಲ್ಲ. ಹಾಗಾಗಿ, ಮುಸ್ಲಿಂಮರು ನಮ್ಮಿಂದ ದೂರವಾಗಿದ್ದಾರೆ ಎಂಬುದು ಎಎಪಿ ಮತ್ತು ಟಿಎಂಸಿ ಮುಖ್ಯಸ್ಥರಿಗೆ ಅರಿವಾಗಿದೆ.
ಮತ್ತೊಂದೆಡೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಕೂಡ ಕಾಂಗ್ರೆಸ್ ತನ್ನ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಈ ಹಾದಿಯಲ್ಲಿ ಎಸ್.ಪಿ ಉದಾರವಾಗಿದೆ ಎಂದು ಹೇಳಿದ್ದಾರೆ.
'ಭಾರತ ರಾಷ್ಟ್ರ ಸಮಿತಿಗೆ ಪ್ರತಿಪಕ್ಷಗಳ ಜೊತೆಗೆ ಒಗ್ಗೂಡಲು ಇಷ್ಟವಿಲ್ಲ. ಬಿಜೆಪಿಯು ಮಹಾರಾಷ್ಟ್ರದಲ್ಲಿ ರಚನೆಯಾಗಿದ್ದ ಮಹಾ ವಿಕಾಸ ಅಘಾಡಿ ಸರ್ಕಾರವನ್ನು ಉರುಳಿಸಿ ಅಧಿಕಾರ ಹಿಡಿದಿದೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಎಲ್ಲಾ ರಾಜ್ಯಗಳಲ್ಲೂ ಪಕ್ಷ ವಿಸ್ತರಿಸಲು ಅಪೇಕ್ಷಿಸುತ್ತಾರೆ. ಬಿಆರ್‌ಎಸ್, ಬಿಜೆಪಿಯ ಬಿ ಟೀಮ್ ಆಗಿದೆ ಎನ್ನುತ್ತಾರೆ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು.
'ವಿಪಕ್ಷಗಳ ಎಲ್ಲಾ ಸಲಹೆಗಳನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ತಯಾರಿಲ್ಲ. ತೆಲಂಗಾಣದಲ್ಲಿ ಪಕ್ಷದ ಸಂಘಟನೆ ಸಾಕಷ್ಟು ವೃದ್ಧಿಸಿದೆ. ಅಲ್ಲಿ ಬಿಆರ್‌ಎಸ್‌ಗೆ ಅವಕಾಶ ಬಿಟ್ಟುಕೊಟ್ಟರೆ ಬಿಜೆಪಿ ವರದಾನವಾಗಲಿದೆ. ಆಂತರಿಕವಾಗಿ ಪಕ್ಷಕ್ಕೆ ನಷ್ಟವಾಗಲಿದೆ' ಎಂಬುದು ಅವರ ಅಭಿಪ್ರಾಯ.