HEALTH TIPS

2024ರ ಚುನಾವಣೆಯಲ್ಲಿ ಎಲ್ಲರಿಗೂ ಆಶ್ಚರ್ಯ ಕಾದಿದೆ: ರಾಹುಲ್‌ ಗಾಂಧಿ

                ವಾಷಿಂಗ್ಟನ್‌: 'ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧದ ಅಗೋಚರ ಅಲೆ ದೇಶದಲ್ಲಿ ಸೃಷ್ಟಿಯಾಗಿದೆ. ಲೋಕಸಭೆಗೆ 2024ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಈ ಅಗೋಚರ ಅಲೆಯು ಎಲ್ಲರನ್ನೂ ಚಕಿತಗೊಳಿಸಲಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹೇಳಿದರು.

             ಆರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ, ರಾಷ್ಟ್ರೀಯ ಪ್ರೆಸ್‌ ಕ್ಲಬ್‌ನಲ್ಲಿ (ಎನ್‌ಪಿಸಿ) ಮಾತುಕತೆ ನಡೆಸಿದರು. ಜೊತೆಗೆ ಇಂಡಿಯನ್‌ ಪ್ರ್ಯಾಂಕನ್‌ ಇಸ್ಲಾಂ ಎಂಬ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲೂ ರಾಹುಲ್‌ ಅವರು ಗುರುವಾರ ಭಾಗವಹಿಸಿ ಮಾತನಾಡಿದರು.

                 'ವಿರೋಧ ಪಕ್ಷಗಳು ಒಂದಾಗಿವೆ. ತಳಮಟ್ಟದಲ್ಲಿ ಕಾರ್ಯತಂತ್ರಗಳನ್ನು ಹೆಣೆಯಲಾಗಿದೆ. ಸುಮ್ಮನೆ ನೀವೇ ಲೆಕ್ಕಾಚಾರ ಮಾಡಿ. ವಿರೋಧ ಪಕ್ಷಗಳು ಒಂದಾದರೆ, ಬಿಜೆಪಿಯನ್ನು ಖಂಡಿತ ಮಣಿಸಬಹುದು' ಎಂದರು.


                  ಕರ್ನಾಟಕದ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಉಲ್ಲೇಖಿಸಿ ಮಾತನಾಡಿದ ಅವರು, 'ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಎಂಬ ಶಕ್ತಿಯನ್ನು ಸೋಲಿಸುವುದು ಅಸಾಧ್ಯ ಎನ್ನುವ ಭಾವನೆ ಜನರಲ್ಲಿ ಇದೆ. ಇದು ಸತ್ಯವಲ್ಲ. ಮೂರು ನಾಲ್ಕು ರಾಜ್ಯಗಳಲ್ಲಿ ಮುಂದೆ ನಡೆಯುವ ಚುನಾವಣೆಗಳ ಫಲಿತಾಂಶಗಳನ್ನು ಕಾದು ನೋಡಿ. ಈ ಫಲಿತಾಂಶಗಳು ದೇಶದಲ್ಲಿ ಮುಂದೇನಾಗಲಿದೆ ಎಂಬುದರ ದಿಕ್ಸೂಚಿಯಾಗಿರಲಿದೆ. ಬಿಜೆಪಿಯು ಪೂರ್ತಿ ನೆಲಕಚ್ಚಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

                 'ವಿರೋಧ ಪಕ್ಷಗಳಾದ ನಮ್ಮಲ್ಲೇ ಕೆಲವು ಕಡೆಗಳಲ್ಲಿ ಸ್ಪರ್ಧೆ ಇದೆ. ಕೆಲವು ಕಡೆ ನಾವು, ಕೆಲವು ಕಡೆ ಅವರು ಬಿಟ್ಟುಕೊಡಬೇಕು. ಕೊಡು-ಕೊಳ್ಳುವಿಕೆ ಇರಬೇಕು. ಆದರೆ, ನನಗೆ ವಿಶ್ವಾಸವಿದೆ ನಾವೆಲ್ಲರೂ ಒಗ್ಗೂಡುತ್ತೇವೆ. ಮುಂದಿನ ಎರಡು ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷವೂ ಉತ್ತಮ ಸಾಧನೆ ತೋರಲಿದೆ. ಈ ಬಗ್ಗೆ ನನಗೆ ವಿಶ್ವಾಸವಿದೆ' ಎಂದರು.

                                          'ಮೋದಿ ಅವರನ್ನೂ ಸೋಲಿಸಬಹುದು'

                ಈಗ ನೋಡಿ ಶೇ 60ರಷ್ಟು ಜನರು ಬಿಜೆಪಿಗೆ ಅಥವಾ ನರೇಂದ್ರ ಮೋದಿ ಅವರಿಗೆ ಮತ ಹಾಕಿಲ್ಲ. ಇದನ್ನು ನೀವು ನೆನಪಿಟ್ಟುಕೊಳ್ಳಬೇಕು. ಬಿಜೆಪಿ ಬಳಿ ಸದ್ದು ಮಾಡುವ ಸಾಧನಗಳಿವೆ. ಅದಕ್ಕಾಗಿ ಅವರು ಕೂಗಬಹುದು ಕಿರುಚಬಹುದು ಇನ್ನೊಬ್ಬರನ್ನು ಹಳಿಯಬಹುದು. ಇದನ್ನು ಬಿಜೆಪಿ ಚೆನ್ನಾಗಿ ಬಳಸಿಕೊಳ್ಳುತ್ತದೆ ಕೂಡ. ಇದೇನೆ ಇದ್ದರೂ ಅವರ ಬಳಿ ಬಹುಮತವಿಲ್ಲ * ಮೋದಿ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಮಾಧ್ಯಮದವರು ಹೇಳಿದ್ದನ್ನು ನೀವು ಕೇಳಿದ್ದೀರಾ. ಈ ವಿಷಯವನ್ನು ಬಹಳ ಉತ್ಪ್ರೇಕ್ಷೆ ಮಾಡಿ ಅವು ಹೇಳುತ್ತವೆ. ಆದರೆ ಮೋದಿ ಅವರು ದುರ್ಬಲರಾಗಿದ್ದಾರೆ. ದೇಶದಲ್ಲಿ ದೊಡ್ಡ ಮಟ್ಟದ ನಿರುದ್ಯೋಗ ಇದೆ ಬೆಲೆ ಏರಿಕೆ ಇದೆ. ಈ ವಿಷಯಗಳು ಜನರನ್ನು ಕಾಡುತ್ತಿವೆ. ಇದು ಬಿಜೆಪಿ ವಿರುದ್ಧದ ಅಸಮಾಧಾನವನ್ನು ತೀವ್ರವಾಗಿಸುತ್ತದೆ * ದೇಶದ ಎಲ್ಲ ಸಂಸ್ಥೆಗಳನ್ನು ಮಾಧ್ಯಮವನ್ನು ನಿಯಂತ್ರಿಸಲಾಗುತ್ತದೆ. ಆದ್ದರಿಂದ ಜಗತ್ತಿನಾದ್ಯಂತ ಮೋದಿ ಅವರಿಗೆ ಪ್ರಖ್ಯಾತಿ ಇದೆ ಎನ್ನುವ ಬಗ್ಗೆ ನನಗೆ ನಂಬಿಕೆ ಇಲ್ಲ. ನನ್ನ ಕಿವಿಗೆ ಬಿದ್ದ ಎಲ್ಲವನ್ನೂ ನಾನು ನಂಬುವುದಿಲ್ಲ

                                          'ದೆಹಲಿಯಷ್ಟಿರುವ ಭೂಭಾಗ ಆಕ್ರಮಿಸಿದ ಚೀನಾ'

                'ಚೀನಾದೊಂದಿಗಿನ ಸಂಬಂಧವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ವಹಿಸುತ್ತಿರುವ ರೀತಿ ಸರಿಯಿಲ್ಲ. ಚೀನಾವು ನಮ್ಮ ಭೂಭಾಗವನ್ನು ಆಕ್ರಮಿಸಿದೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದು ರಾಹುಲ್‌ ಗಾಂಧಿ ಹೇಳಿದರು. 'ದೆಹಲಿಯಷ್ಟು ದೊಡ್ಡದಾದ ನಮ್ಮ ಭೂಭಾಗವನ್ನು ಚೀನಾ ಆಕ್ರಮಿಸಿದೆ; ಸುಮಾರು 1500 ಚದರ ಕಿ.ಮೀನಷ್ಟು. ಇದನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಪ್ರಧಾನಿ ಮೋದಿ ಅವರಿಗೆ ಈ ಬಗ್ಗೆ ಯಾವುದೇ ಚಿಂತೆ ಇದ್ದಂತಿಲ್ಲ. ಭೂಭಾಗವನ್ನು ಆಕ್ರಮಿಸಿಕೊಂಡಿರುವುದನ್ನು ಮೋದಿ ಅವರು ಬೇರೆ ರೀತಿಯೇ ಅರ್ಥ ಮಾಡಿಕೊಂಡಂತೆ ತೋರುತ್ತಿದೆ' ಎಂದರು. ರಾಹುಲ್‌ ಗಾಂಧಿ ಅವರ ಆರೋಪವನ್ನು ಕೇಂದ್ರ ಸರ್ಕಾರವು ತಳ್ಳಿಹಾಕಿದೆ.

                                                  'ಹಲೋ ಮಿಸ್ಟರ್‌ ಮೋದಿ'

                  ಸಿಲಿಕಾನ್‌ ವ್ಯಾಲಿಯ ನವೋದ್ಯಮದ ಉದ್ಯಮಿಗಳೊಂದಿಗೆ ಮಾತನಾಡಿದ ರಾಹುಲ್‌ ಗಾಂಧಿ 'ಡೇಟಾ ಸುರಕ್ಷತೆ ಮತ್ತು ಭದ್ರತೆಯ ಸಂಬಂಧ ಸರಿಯಾದ ನಿಯಮಗಳು ಬೇಕು' ಎಂದು ಅಭಿಪ್ರಾಯಪಟ್ಟರು. 'ನನ್ನ ಮೊಬೈಲ್‌ ಅನ್ನು ಕದ್ದಾಲಿಕೆ ಮಾಡಲಾಗಿತ್ತು ಎಂದ ಅವರು ತಕ್ಷಣವೇ ತಮ್ಮ ಮೊಬೈಲ್‌ ಅನ್ನು ತೆಗೆದುಕೊಂಡು 'ಹಲೋ ಮಿಸ್ಟರ್‌ ಮೋದಿ' ಎಂದರು. 'ಡೇಟಾ ಸುರಕ್ಷತೆಯ ಕುರಿತು ರಾಷ್ಟ್ರಮಟ್ಟದಲ್ಲಿ ಹಾಗೂ ವೈಯಕ್ತಿಕ ಮಟ್ಟದಲ್ಲಿಯೂ ನಿಮಯಗಳು ಜಾರಿಯಾಗಬೇಕಾಗಿದೆ. ಒಬ್ಬರ ಫೋನ್‌ ಅನ್ನು ಕದ್ದಾಲಿಕೆ ಮಾಡಬೇಕು ಎಂದು ಸರ್ಕಾರ ನಿರ್ಧರಿಸಿದರೆ ಸರ್ಕಾರಕ್ಕೆ ಈ ಕೆಲಸ ಕಷ್ಟಸಾಧ್ಯವಲ್ಲ. ಹೀಗೆ ಒಬ್ಬನ ಫೋನ್‌ ಅನ್ನು ಕದ್ದಾಲಿಸುವುದು ನೇರವಾದ ಯುದ್ಧತಂತ್ರಗಾರಿಕೆ ಅಲ್ಲ' ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries