ನವದೆಹಲಿ: ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು, ದೇಶದಾದ್ಯಂತ ಮುಸ್ಲಿಂ ಮಹಿಳೆಯರನ್ನು ತಲುಪುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಯೋಜನೆಗಳ ಬಗ್ಗೆ ಹೇಳುತ್ತಿದೆ.
ಇದೇ ವರ್ಷಾಂತ್ಯದಲ್ಲಿ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಹಾಗೂ 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ.
'ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾವು ದೇಶದಾದ್ಯಂತ ಪ್ರತಿ ಜಿಲ್ಲೆಯ 200 ಮುಸ್ಲಿಂ ಮಹಿಳೆಯರನ್ನು ತಲುಪಲು ಸಿದ್ಧತೆ ನಡೆಸಿದ್ದು, ತ್ರಿವಳಿ ತಲಾಖ್ ರದ್ದು, ಮಹಿಳಾಸ್ನೇಹಿ ಯೋಜನೆಗಳಾದ ಸ್ವಚ್ಛ ಭಾರತ್, ಉಜ್ವಲಾ ಮತ್ತು 'ಬೇಟಿ ಬಚಾವೋ ಬೇಟಿ ಪಢಾವೋ' ಯೋಜನೆಯ ಬಗ್ಗೆ ತಿಳಿಸಲಾಗುವುದು. ಅಷ್ಟೇ ಅಲ್ಲ ಪ್ರತಿ ಜಿಲ್ಲೆಯಲ್ಲೂ ನಾವು 150ರಿಂದ 200 ಮುಸ್ಲಿಂ ಮಹಿಳೆಯರನ್ನು ತಲುಪುತ್ತೇವೆ. ಅವರಿಗಾಗಿ ಪಕ್ಷವು ಇನ್ನೇನು ಮಾಡಬಹುದು ಎಂಬ ಕುರಿತು ಅವರ ಸಲಹೆಗಳನ್ನೂ ಪಡೆಯುತ್ತೇವೆ' ಎಂದು ಪಕ್ಷದ ಜಮಾಲ್ ಸಿದ್ಧಿಕಿ ಹೇಳಿದ್ದಾರೆ.
'ಮೋರ್ಚಾವು ಜಿಲ್ಲಾವಾರು ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಸಮುದಾಯದ ಸುಮಾರು 500 ಧರ್ಮಗುರುಗಳನ್ನು ತಲುಪುವ ಪ್ರಯತ್ನ ಮಾಡುತ್ತಿದೆ. ಮಾರ್ಚ್ ತಿಂಗಳಲ್ಲಿ 'ಸೂಫಿಸಂತರ ಸಂವಾದ' ಸಮ್ಮೇಳನವನ್ನು ನಡೆಸಲಾಗಿತ್ತು. ಅಲ್ಲಿ 153ಕ್ಕೂ ಹೆಚ್ಚಿನ ಆಧ್ಯಾತ್ಮಿಕ ನಾಯಕರಿಗೆ ತರಬೇತಿ ನೀಡಲಾಗಿದೆ. ಈ ನಾಯಕರು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಪಕ್ಷದ ಸಂದೇಶವನ್ನು ತಲುಪಿಸಲು ಮಸೀದಿ, ದರ್ಗಾ, ಗುರುದ್ವಾರ ಮತ್ತು ಚರ್ಚ್‌ಗಳ ಧರ್ಮಗುರುಗಳನ್ನು ತಲುಪುತ್ತಾರೆ. ನಮ್ಮ ಮೋರ್ಚಾ ವಿಭಾಗವು 'ಸರಳ್ ಆಯಪ್' ಮೂಲಕ ಜನರನ್ನು ತಲುಪಲಿದೆ' ಎಂದು ಸಿದ್ಧಿಕಿ ಮಾಹಿತಿ ನೀಡಿದರು.
'ನಾವು ಬಲವಾದ ಧಾರ್ಮಿಕ ಸಂಬಂಧಗಳನ್ನು ಹೊಂದಿಲ್ಲದಿದ್ದರೆ ಅಭಿವೃದ್ಧಿಯ ಅರ್ಥವೇನು? ಧರ್ಮವೇ ಬಲಿಷ್ಠ ದೇಶಕ್ಕೆ ಬುನಾದಿ ಎಂಬುದು ಬಿಜೆಪಿಯ ಧ್ಯೇಯ. ಈ ನಿಟ್ಟಿನಲ್ಲಿ ನಾವು ಬುದ್ಧಿಜೀವಿಗಳು, ರಾಜಕೀಯೇತರ ವ್ಯಕ್ತಿಗಳು, ರೈತರು ಮೊದಲಾದವರನ್ನು ತಲುಪುತ್ತಿದ್ದೇವೆ' ಎಂದೂ ಅವರು ಹೇಳಿದ್ದಾರೆ.