ಪುಣೆ: ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಬಿಹಾರದ ಪಟ್ನಾದಲ್ಲಿ ನಡೆದ ವಿರೋಧಪಕ್ಷಗಳ ಸಭೆಯಲ್ಲಿ ಪ್ರಧಾನಿ ಹುದ್ದೆಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಸೋಮವಾರ ಹೇಳಿದ್ದಾರೆ.
ಪುಣೆ: ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಬಿಹಾರದ ಪಟ್ನಾದಲ್ಲಿ ನಡೆದ ವಿರೋಧಪಕ್ಷಗಳ ಸಭೆಯಲ್ಲಿ ಪ್ರಧಾನಿ ಹುದ್ದೆಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಸೋಮವಾರ ಹೇಳಿದ್ದಾರೆ.
ಮಹಾರಾಷ್ಟ್ರದ ಬಾರಾಮತಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, 'ಹಣದುಬ್ಬರ, ನಿರುದ್ಯೋಗ ಮತ್ತು ಕೆಲವು ಕಡೆಗಳಲ್ಲಿ ಕೋಮು ಶಕ್ತಿಗಳನ್ನು ಪ್ರೋತ್ಸಾಹಿಸುವ ಉದ್ದೇಶಪೂರ್ವಕ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ಚರ್ಚೆ ನಡೆಯಿತು' ಎಂದು ಹೇಳಿದರು.
ವಿರೋಧ ಪಕ್ಷಗಳ ಸಭೆಯ ಬಗ್ಗೆ ಟೀಕೆ ಮಾಡಿರುವ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪವಾರ್, 'ಬಿಜೆಪಿಯವರು ಈ ಸಮಾವೇಶದ ಬಗ್ಗೆ ಏಕೆ ಚಿಂತಿತರಾಗಿದ್ದಾರೆ? ಇದು ಅವರ ರಾಜಕೀಯ ಪ್ರಬುದ್ಧತೆಯ ಕೊರತೆಯನ್ನು ತೋರಿಸದೆ' ಎಂದು ಟೀಕಿಸಿದರು.
'ಬಿಜೆಪಿ ಅಧಿಕಾರದಲ್ಲಿರುವೆಡೆ ಯಾವ ರೀತಿ ಸಮುದಾಯಗಳ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದೆ ಎನ್ನುವ ಕುರಿತೂ ಚರ್ಚೆ ಆಯಿತು. ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಸಮುದಾಯಗಳ ನಡುವೆ ಮೂಡಿಸುವ ಬಿರುಕು ಯಾವುದೇ ಸಮಾಜಕ್ಕೆ ಹಾನಿಕಾರಕ. ಇದನ್ನು ನಿಯಂತ್ರಿಸಲು ನಿರ್ಧರಿಸಲಾಯಿತು' ಎಂದು ಪವಾರ್ ಹೇಳಿದರು.
ಪ್ರಧಾನಿ ಹುದ್ದೆಗೆ 19 ಮಂದಿ ಆಕಾಂಕ್ಷಿಗಳು ಸಭೆಯಲ್ಲಿ ಒಗ್ಗೂಡಿದ್ದಾರೆ ಎಂಬ ಬಿಜೆಪಿಯ ಟೀಕೆ ಬಗ್ಗೆ ಕೇಳಿದ ಪ್ರಶ್ನೆಗೆ 'ಇದು ಬಾಲಿಶ ಹೇಳಿಕೆ' ಎಂದು ಪವಾರ್ ತಿರುಗೇಟು ನೀಡಿದರು.