ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ಬಿಜೆಪಿ ತಯಾರಿಯನ್ನು ಆರಂಭಿಸಿದ್ದು, ಈ ಚುನಾವಣೆಯನ್ನು ಗೆಲ್ಲಲು ಮೋದಿ ಮ್ಯಾಜಿಕ್ ಹಾಗೂ ಹಿಂದುತ್ವವಷ್ಟೇ ಸಾಲದು ಎಂದು ಆರ್ ಎಸ್ಎಸ್ ಮುಖವಾಣಿಯೂ ಆಗಿರುವ ವಾರಪತ್ರಿಕೆ ಆರ್ಗನೈಸರ್ ಬಿಜೆಪಿಗೆ ಸಲಹೆ ನೀಡಿದೆ. ಮೋದಿ ಮ್ಯಾಜಿಕ್ ಹಾಗೂ ಹಿಂದುತ್ವವಷ್ಟೇ ಚುನಾವಣೆ ಗೆಲ್ಲುವುವುದರ ಸೂತ್ರ ಎಂಬ ಅಭಿಪ್ರಾಯವನ್ನು ಆರ್ಗನೈಸರ್ ತಿರಸ್ಕರಿಸಿದೆ.
ಲೋಕಸಭಾ ಚುನಾವಣೆಗೂ ಮುನ್ನ ಬಂದಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಆಧಾರವಾಗಿಟ್ಟುಕೊಂಡು ಆರ್ಗನೈಸರ್ ಈ ಸಲಹೆಯನ್ನು ಬಿಜೆಪಿಗೆ ನೀಡಿದೆ.
ಲೋಕಸಭಾ ಚುನಾವಣೆಯನ್ನು ಗೆಲ್ಲುವುದಕ್ಕೆ ಬಿಜೆಪಿಗೆ ಮೋದಿ ಮ್ಯಾಜಿಕ್, ಹಿಂದುತ್ವವಷ್ಟೇ ಸಾಕಾಗುವುದಿಲ್ಲ. ಸ್ಥಳೀಯ ಮಟ್ಟದಲ್ಲಿ ಬಲಿಷ್ಠ ನಾಯಕತ್ವ ಹಾಗೂ ತನ್ಮೂಲಕ ಸಮರ್ಥವಾದ ಆಡಳಿತದ ಅಗತ್ಯತೆಯೂ ಇದೆ ಎಂಬುದು ಬಿಜೆಪಿಗೆ ಆರ್ಗನೈಸರ್ ನೀಡಿರುವ ಸಲಹೆಯ ಸಾರಾಂಶವಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ನ ಗೆಲುವು ಬಿಜೆಪಿಗೆ ಪರಿಸ್ಥಿತಿಯನ್ನು ಅವಲೋಕಿಸುವುದಕ್ಕೆ ಸೂಕ್ತವಾದ ಸಮಯವಾಗಿದೆ ಎಂದು ಆರ್ಗನೈಸರ್ ಹೇಳಿದೆ.
ಚುನಾವಣೆಯಲ್ಲಿ ಭ್ರಷ್ಟಾಚಾರ ಪ್ರಮುಖ ವಿಷಯವಾಗಿತ್ತು ಎಂದು ಹೇಳಿರುವ ಆರ್ಗನೈಸರ್, ಮೋದಿ ಪ್ರಧಾನಿಯಾದ ಮೊದಲ ಅವಧಿಯಲ್ಲಿ ಭ್ರಷ್ಟಾಚಾರ ಪ್ರಮುಖ ವಿಷಯವಾಗಿತ್ತು, ಆದರೆ ಒಂದು ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟಾಚಾರದ ಆರೋಪವನ್ನು ಸಮರ್ಥಿಸಿಕೊಳ್ಳಬೇಕಾಯಿತು ಎಂಬುದನ್ನು ಉಲ್ಲೇಖಿಸಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಮತದಾರರ ಗಮನವನ್ನು ಸ್ಥಳೀಯ ವಿಷಯಗಳತ್ತ ಸೆಳೆಯುವಲ್ಲಿ ಶ್ರಮಿಸಿದರೆ, ಆಡಳಿತಾರೂಢ ಪಕ್ಷ ರಾಷ್ಟ್ರೀಯ ಮಟ್ಟದ ಯೋಜನೆಗಳತ್ತ ಸೆಳೆಯಲು ಯತ್ನಿಸಿತ್ತು.
ಈ ಹಿಂದೆ ಪಡೆದಿದ್ದ ಮತಗಳ ಪಾಲಿಗೆ ಮತ್ತಷ್ಟನ್ನು ಸೇರಿಸಿಕೊಳ್ಳುವುದರಲ್ಲಿ ಬಿಜೆಪಿ ಕರ್ನಾಟಕದಲ್ಲಿ ವಿಫಲವಾಯಿತು ಇದು ನಂತರದಲ್ಲಿ ಕಳಪೆ ಸ್ಥಾನಗಳಿಗೆ ಪರಿವರ್ತನೆಯಾಯಿತು. ಹಾಲಿ ಸಚಿವರ ವಿರುದ್ಧದ ಆಡಳಿತ ವಿರೋಧಿ ನಿಲುವು ಬಿಜೆಪಿಗೆ ಕಳವಳಕಾರಿಯಾಗಬೇಕು,’’ ಎಂದು ಆರ್ಗನೈಸರ್ ಹೇಳಿದೆ.
ಇದಷ್ಟೇ ಅಲ್ಲದೇ ಕರ್ನಾಟಕದ ಚುನಾವಣೆಯಲ್ಲಿ ಉತ್ತರ ಹಾಗೂ ದಕ್ಷಿಣ ಭಾರತವೆಂಬ ತಾರತಮ್ಯವನ್ನು ಕಾಂಗ್ರೆಸ್ ಮತ ಪಡೆಯಲು ಬಳಕೆ ಮಾಡಿದ್ದು ಅತ್ಯಂತ ಅಪಾಯಕಾರಿ ಟ್ರೆಂಡ್ ಎಂದೂ ಆರ್ಗನೈಸರ್ ಹೇಳಿದೆ.