ಕಾಸರಗೋಡು: ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯೊಂದಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಜಿಲ್ಲೆಯ ಆದಿವಾಸಿ ಬುಡಕಟ್ಟಿನ ಕೊರಗ ವಿಭಾಗದ 20 ಜನರು ಸೇರಿದಂತೆ ಕೇರಳದಿಂದ ನೂರು ಮಂದಿ ಸದಸ್ಯರ ತಂಡ ಭಾನುವಾರ ದೆಹಲಿಗೆ ಪ್ರಯಾಣ ಬೆಳೆಸಲಿದೆ. ಕಾಸರಗೋಡು ಜಿಲ್ಲೆಯ 20ಮಂದಿ ಕೊರಗ ಸಮುದಾಯದ ತಂಡ ಕಾಸರಗೋಡು ರೈಲ್ವೆ ನಿಲ್ದಾಣದಿಂದ ಶನಿವಾರ ತ್ರಿಶ್ಯೂರ್ ಕಿಲಾ ತೆರಳಿದ್ದು, ಅಲ್ಲಿ ಕೇರಳ ರಅಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಕಲ್ಯಾಣ ಸಚಿವ ಕೆ.ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ ಸಮಲೋಚನೆ ನಡೆಸಿದರು.
ಬುಡಕಟ್ಟು ಜನಾಂಗದವರು ವಾಸಿಸುವ ದೇಶದ ಪ್ರತಿ ರಾಜ್ಯದಿಂದ 100 ಜನರಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಆಯೋಜಿಸಿರುವ ಸಮ್ಮೇಳನದಲ್ಲಿ ಪ್ರತಿ ವಿಭಾಗದಿಂದ 20 ಜನರು ರಾಷ್ಟ್ರಪತಿಯನ್ನು ಖುದ್ದಾಗಿ ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಬುಡಕಟ್ಟು ವಿಭಾಗ ಎದುರಿಸುತ್ತಿರುವ ಸಮಸ್ಯೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೇರಳದಲ್ಲಿ ಕೊರಗ, ಚೋಳನಾಯ್ಕರ್, ಕುರುಬ, ಕಾಡರ್ ಮತ್ತು ಕಾಟುನಾಯ್ಕರ್ ಎಂಬ ಐದು ಬುಡಕಟ್ಟು ವಿಭಾಗಗಳಿವೆ. ಈ ಪೈಕಿ ಕೊರಗರು ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ಇದ್ದಾರೆ.
ಭಾನುವಾರ ಕೊಚ್ಚಿ ನೆಡುಂಬಾಶ್ಯೇರಿ ವಿಮಾನನಿಲ್ದಾಣದಿಂದ ನೂರು ಮಂದಿ ಕೇರಳವನ್ನು ಪ್ರತಿನಿಧೀಕರಿಸಿ ದೆಹಲಿಗೆ ತೆರಳಲಿದ್ದಾರೆ. ಜೂನ್ 12 ರಂದು ಸಮ್ಮೇಳನದಲ್ಲಿ ಭಾಗವಹಿಸಿ, 13 ರಂದು ಊರಿಗೆ ವಾಪಸಾಘಲಿದ್ದಾರೆ.
ಕಾಸರಗೋಡು ಜಿಲ್ಲೆಯ 11ಸ್ಥಳೀಯಾಡಳಿತ ಸಂಸ್ಥೆಗಳಲ್ಲಾಗಿ ಕೊರಗ ಸಮುದಾಯದ 585 ಕುಟುಂಬಗಳಿದ್ದು, ಇದರಲ್ಲಿ 1503ಮಂದಿ ಸದಸ್ಯರಿದ್ದಾರೆ. ಕೊರಗ ಸಮುದಾಐದ ಬಹುತೇಕ ಮಂದಿ ಕಾಡಿನಿಂದ ಸಂಗ್ರಹಿಸಿದ ಬಿದಿರು, ಬಳ್ಳಿಗಳಿಂದ "ಬುಟ್ಟಿ"ಗಳನ್ನು ತಯಾರಿಸುವ ಮೂಲಕ ತಮ್ಮ ಜೀವನೋಪಾಯ ಕಂಡುಕೊಮಡಿದ್ದಾರೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಅವರ ಸಮಗ್ರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಸಮ್ಮೇಳನವನ್ನು ಆಯೋಜಿಸಿದೆ.