ಭೋಪಾಲ್: ಜನಸಾಮಾನ್ಯರ ಮೇಲೆ ದಾಳಿ ಮಾಡುತ್ತಿದ್ದ ₹ 21,000 ಬಹುಮಾನ ಘೋಷಿಸಲಾಗಿದ್ದ 'ಮೋಸ್ಟ್ ವಾಂಟೆಡ್' ಕೋತಿಯನ್ನು ಪ್ರಾಣಿ ರಕ್ಷಣಾ ತಂಡದ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಮಧ್ಯಪ್ರದೇಶದ ರಾಜ್‌ಗಢ ಪಟ್ಟಣದಲ್ಲಿ ಕಳೆದ 15 ದಿನಗಳಿಂದ ಜನಸಾಮಾನ್ಯರ ಮೇಲೆ ಈ ಕೋತಿ ದಾಳಿ ಮಾಡುತ್ತಿತ್ತು.
ಈ ಕೋತಿಯನ್ನು ಹಿಡಿದುಕೊಟ್ಟವರಿಗೆ ₹ 21,000 ಬಹುಮಾನ ನೀಡುವುದಾಗಿ ವಿನೋದ್ ಸಾಹು ಘೋಷಣೆ ಮಾಡಿದ್ದರು. ಕಳದೊಂದು ವಾರದಿಂದ ಸ್ಥಳೀಯರು ಸೇರಿದಂತೆ ನಾಲ್ಕು ತಂಡಗಳು ಕೋತಿಯನ್ನು ಹಿಡಿಯಲು ಪ್ರಯತ್ನ ಮಾಡಿದ್ದವು. ಆದರೂ ಈ 'ಮೋಸ್ಟ್ ವಾಂಟೆಡ್' ಕೋತಿ ಹಿಡಿಯಲು ಸಾಧ್ಯವಾಗಿರಲಿಲ್ಲ.
ಭೋಪಾಲ್ ಜಿಲ್ಲಾಧಿಕಾರಿಗಳ ಸೂಚನೆಯಂತೆ ಉಜ್ಜಯಿನಿಯಿಂದ ಕರೆಸಲ್ಪಟ್ಟ ಪ್ರಾಣಿ ರಕ್ಷಣಾ ತಂಡ ಕೋತಿಯನ್ನು ಹಿಡಿಯುವಲ್ಲಿ ಯಶಸ್ವಿಯಾಯಿತು. ಕೋತಿ ಹಿಡಿಯುವ ಪ್ರಯ್ನತ್ನಕ್ಕೆ ಸ್ಥಳೀಯರು ಸಹಕಾರ ನೀಡಿದರು.
ಡ್ರೋನ್ ಕ್ಯಾಮೆರಾ ಬಳಕೆ ಮಾಡಿ ಹಾಗೂ ಅರವಳಿಕೆ ಮದ್ದು ನೀಡಿ ಕೋತಿಯನ್ನು ಹಿಡಿಯಲಾಯಿತು. ಈ ಕೋತಿಯನ್ನು ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕೋತಿಯನ್ನು ಸೆರೆ ಹಿಡಿದ ಉಜ್ಜಯಿಯ ಪ್ರಾಣಿ ರಕ್ಷಣಾ ತಂಡಕ್ಕೆ ₹ 21,000 ನಗದು ಬಹುಮಾನ ನೀಡಲಾಗುವುದು ಎಂದು ವಿನೋದ್ ಸಾಹು ಹೇಳಿದ್ದಾರೆ.