ನ್ಯೂಯಾರ್ಕ್: ಮುಂದಿನ ವಾರ ನ್ಯೂಯಾರ್ಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ಐತಿಹಾಸಿಕ 9 ನೇ ಅಂತರರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಎದುರು ನೋಡುತ್ತಿರುವುದಾಗಿ ವಿಶ್ವಸಂಸ್ಥೆಯ ಅಧಿಕಾರಿಗಳು, ಏಜೆನ್ಸಿಗಳು ಮತ್ತು ಸದಸ್ಯ ರಾಷ್ಟ್ರಗಳು ಹೇಳಿವೆ.
ಜೂನ್ 21 ರಂದು ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಮೋದಿ ಅವರು ಯೋಗ ಅಧಿವೇಶನವನ್ನು ಮುನ್ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತೀಯ ನಾಯಕನೊಂದಿಗೆ ಪಾಲ್ಗೊಳ್ಳಲು ಉತ್ಸುಕರಾಗಿದ್ದೇವೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಮತ್ತು ಸದಸ್ಯ ರಾಷ್ಟ್ರಗಳು ತಮ್ಮ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
"ಮುಂದಿನ ವಾರ ಯುಎನ್‌ಹೆಚ್‌ಕ್ಯೂ ನಾರ್ತ್ ಲಾನ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಎದುರು ನೋಡುತ್ತಿದ್ದೇವೆ" ಎಂದು ವಿಶ್ವಸಂಸ್ಥೆಯ ಉಪ ಕಾರ್ಯದರ್ಶಿ ಅಮಿನಾ ಮೊಹಮ್ಮದ್ ಟ್ವೀಟ್ ಮಾಡಿದ್ದಾರೆ. ವಿಶ್ವಸಂಸ್ಥೆಯ ಫ್ರೆಂಚ್ ಮಿಷನ್ ಕೂಡಾ ಇದೇ ರೀತಿ ಹೇಳಿದೆ.
ಐತಿಹಾಸಿಕ ಯೋಗ ಅಧಿವೇಶನದಲ್ಲಿ ಯುಎನ್‌ನ ಉನ್ನತ ಅಧಿಕಾರಿಗಳು, ರಾಯಭಾರಿಗಳು, ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಮತ್ತು ಜಾಗತಿಕ ಮತ್ತು ವಲಸೆ ಸಮುದಾಯದ ಪ್ರಮುಖ ಸದಸ್ಯರು ಭಾಗವಹಿಸುವ ನಿರೀಕ್ಷೆಯಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77 ನೇ ಅಧಿವೇಶನದ ಅಧ್ಯಕ್ಷ ಸಿಸಾಬಾ ಕೊರ್ಸಿ ಕೂಡಾ ಟ್ವೀಟ್ ಮಾಡಿದ್ದು, ಯೋಗ ದಿನಾಚರಣೆ ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ನಿಮ್ಮ ಭಾಗವಹಿಸುವಿಕೆ ಕಾರ್ಯಕ್ರಮವನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ. ಯೋಗವು ಉತ್ತಮ ಆರೋಗ್ಯ ಮತ್ತು ಕ್ಷೇಮವನ್ನು ಹೆಚ್ಚಿಸಲು ಜಗತ್ತನ್ನು ಒಟ್ಟುಗೂಡಿಸುತ್ತದೆ ಎಂದು ಹೇಳಿದ್ದಾರೆ.