ರೋಮ್: ಇಟಾಲಿಯಲ್ಲಿ 24 ವರ್ಷಗಳ ಅವಧಿಯಲ್ಲಿ 20 ವರ್ಷ ರಜೆ ಪಡೆದ ಶಿಕ್ಷಕಿಯನ್ನು ಅತ್ಯಂತ ಕೆಟ್ಟ ಉದ್ಯೋಗಿ ಎಂದು ಘೋಷಿಸಲಾಗಿದೆ.
ಅನಾರೋಗ್ಯ ಕಾರಣ ನೀಡಿ ಈ ಶಿಕ್ಷಕಿ 20 ವರ್ಷಗಳ ಕಾಲ ಕರ್ತವ್ಯಕ್ಕೆ ಹಾಜರಾಗಿಲ್ಲ. ಇದಷ್ಟೇ ಅಲ್ಲದೇ ಪರ್ಯಾಯ ರಜೆ ಹಾಗೂ ಕಾನ್ಫರೆನ್ಸ್ ಗಳಲ್ಲಿ ಭಾಗಿಯಾಗಲು ಅನುಮತಿ ಪಡೆದು ರಜೆ ಹಾಕುತ್ತಿದ್ದರು.
ಡೈಲಿ ಮೇಲ್ ಈ ಬಗ್ಗೆ ವರದಿ ಪ್ರಕಟ ಮಾಡಿದ್ದು, ಸಿಂಜಿಯೊ ಪಾವೊಲಿನಾ ಡಿ ಲಿಯೊ ಎಂಬ ಮಹಿಳೆ ಸಾಹಿತ್ಯ ಮತ್ತು ತತ್ವಶಾಸ್ತ್ರವನ್ನು ಕಲಿಸಲು ವೆನಿಸ್ ಬಳಿ ಮಾಧ್ಯಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ 24 ವರ್ಷಗಳ ಅವಧಿಯಲ್ಲಿ ಈಕೆ ಕೆಲಸ ಮಾಡಿದ್ದು 4 ವರ್ಷಗಳಷ್ಟೇ.
ಕರ್ತವ್ಯಕ್ಕೆ ಹಾಜರಾಗದ ವ್ಯಕ್ತಿಯನ್ನು ಜೂ.22 ರಂದು ವಜಾಗೊಳಿಸಲಾಗಿದೆ. ಅಪರೂಪಕ್ಕೆ ಕೆಲಸಕ್ಕೆ ಹಾಜರಾದರೂ ಈ ಶಿಕ್ಷಕಿಯ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಮೌಖಿಕ ಪರೀಕ್ಷೆಯಲ್ಲಿ ಈ ಶಿಕ್ಷಕಿ ಮೆಸೇಜ್ ಮಾಡುತ್ತಾ, ಪಠ್ಯಗಳನ್ನು ಇಟ್ಟುಕೊಳ್ಳದೇ ಯಾದೃಚ್ಛಿಕವಾಗಿ ಶ್ರೇಣಿಗಳನ್ನು ನೀಡುತ್ತಾರೆ ಎಂದು ಆರೋಪಿಸಿದ್ದರು.
ಈ ಉದ್ಯೋಗಕ್ಕೆ ಡಿ ಲಿಯೊ ಶಾಶ್ವತವಾಗಿ ಮತ್ತು ಸಂಪೂರ್ಣವಾಗಿ ಸೂಕ್ತವಲ್ಲ ಎಂದು ಇಟಾಲಿಯ ಸುಪ್ರೀಂ ಕೋರ್ಟ್ ಹೇಳಿದೆ. ಡಿ ಲಿಯೊ ಮೂರು ಪದವಿಗಳನ್ನು ಹೊಂದಿದ್ದಾರೆ. ನೌಕರಿಯಿಂದ ವಜಾಗೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗಳಿಗೆ "ಬೀಚ್" ನಲ್ಲಿದ್ದ ಆಕೆ ಪ್ರತಿಕ್ರಿಯೆ ನೀಡಲಿಲ್ಲ. ಈಕೆ ಅತಿಯಾಗಿ ರಜೆ ಪಡೆಯುತ್ತಿದ್ದದ್ದು ಶಾಲಾ ಇನ್ಸ್ಪೆಕ್ಟರ್ ಗಳ ಗಮನಕ್ಕೆ ಬಂದಿದ್ದು, ಈ ಬಳಿಕ ಶಾಲೆ ಆಕೆಯನ್ನು ವಜಾಗೊಳಿಸಿದೆ.