ಬಾಲಸೋರ್: ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದ ಸಮೀಪ ಶುಕ್ರವಾರ ರಾತ್ರಿ ಸಂಭವಿಸಿದ ಮೂರು ರೈಲುಗಳನ್ನು ಒಳಗೊಂಡ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆಯಾಗಿದೆ. ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಬಾಲಸೋರ್ ಜಿಲ್ಲಾ ಆಸ್ಪತ್ರೆ ಹಾಗೂ ಇತರ ಆಸ್ಪತ್ರೆಗಳಲ್ಲಿ ಗಾಯಾಳುಗಳನ್ನು ದಾಖಲಿಸಿದ್ದು, ಸಾವಿನ ಸಂಖ್ಯೆ ಹೆಚ್ಚು ಸಾಧ್ಯತೆ ಇದೆ.
'ಗಾಯಗೊಂಡವರನ್ನು ರಕ್ಷಿಸುವ ಕಾರ್ಯ ಪೂರ್ಣಗೊಂಡಿದೆ' ಎಂದು ಆಗ್ನೇಯ ರೈಲ್ವೆ ವಕ್ತಾರ ಆದಿತ್ಯ ಚೌಧರಿ ಹೇಳಿದ್ದಾರೆ.
'ಆಗ್ನೇಯ ರೈಲ್ವೆಯ ರೈಲ್ವೆ ಸುರಕ್ಷತಾ ಆಯುಕ್ತ (ಆಗ್ನೇಯ ವೃತ್ತ) ಎ.ಎಂ.ಚೌಧರಿ ನೇತೃತ್ವದ ಸಮಿತಿಯಿಂದ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ' ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಬೆಂಗಳೂರು- ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೋರೊಮಂಡಲ್ ಎಕ್ಸ್‌ಪ್ರೆಸ್ ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಾದ ಸಾವು- ನೋವಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರಾಜ್ಯದಲ್ಲಿ ಶನಿವಾರ ಶೋಕಾಚರಣೆ ಘೋಷಿಸಿದ್ದರು.
'ರಕ್ಷಣಾ ಕಾರ್ಯದಲ್ಲಿ ಎನ್‌ಡಿಆರ್‌ಎಫ್, ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಪಡೆ (ಒಡಿಆರ್‌ಎಎಫ್), ಅಗ್ನಿಶಾಮಕ ದಳ ಸಿಬ್ಬಂದಿ ತೊಡಗಿದ್ದು, ರೈಲು ಬೋಗಿಗಳಡಿ ಸಿಲುಕಿರುವವರನ್ನು ರಕ್ಷಿಸುವ ಹಾಗೂ ಮೃತದೇಹಗಳನ್ನು ಹೊರಗೆ ತೆಗೆಯುವ ಕಾರ್ಯ ಶನಿವಾರದವರೆಗೆ ನಡೆಯಿತು' ಎಂದು ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ಕೆ.ಜೇನಾ ತಿಳಿಸಿದ್ದಾರೆ.
ನೆರೆಯ ಪಶ್ಚಿಮ ಬಂಗಾಳದ ಬ್ಯಾರಕ್‌ಪುರ ಹಾಗೂ ಪನಾಗಢದಿಂದ ಬಂದಿರುವ, ಸೇನೆಯ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ತಂಡಗಳನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗಿ ಎರಡು ಎಂಐ-17 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಸವಾಲಿನ ರಕ್ಷಣಾ ಕಾರ್ಯ:
ಅಪಘಾತದಿಂದಾಗಿ ಹಳಿಗಳಿಂದ ತುಸು ದೂರ ಬಿದ್ದಿರುವ ಬೋಗಿಗಳನ್ನು ಎತ್ತುವುದು ಹಾಗೂ ಅದರಡಿ ಸಿಲುಕಿರುವವರ ರಕ್ಷಣೆಯೇ ಸವಾಲಿನದಾಗಿತ್ತು. ಈ ಕಾರ್ಯದಲ್ಲಿ ದೊಡ್ಡ ಕ್ರೇನ್‌ಗಳು ಹಾಗೂ ಬುಲ್‌ಡೋಜರ್‌ಗಳನ್ನು ಬಳಸಲಾಗಿದೆ.
ಹಳಿ ತಪ್ಪಿ, ಉರುಳಿ ಬಿದ್ದಿದ್ದ ಬೋಗಿಗಳ ಕಿಟಕಿ, ಬಾಗಿಲು ಸೇರಿ ಇತರ ಭಾಗಗಳನ್ನು 'ಗ್ಯಾಸ್ ಕಟರ್'ಗಳ ಮೂಲಕ ಕತ್ತರಿಸಿ, ಅಲ್ಲಿ ಸಿಲುಕಿದ್ದವರನ್ನು ರಕ್ಷಿಸಲಾಯಿತು.
- ರಕ್ತಸಿಕ್ತ ದೇಹಗಳು... ರಕ್ತಸಿಕ್ತ ಹಾಗೂ ವಿರೂಪಗೊಂಡ ಮೃತದೇಹಗಳು ಅಪಘಾತದ ಗಂಭೀರತೆಯನ್ನು ಹೇಳುತ್ತಿದ್ದವು. ಡಿಕ್ಕಿಯ ರಭಸಕ್ಕೆ ಸಿಲುಕಿ ಸತ್ತವರ ದೇಹಗಳು ಒಂದರ ಮೇಲೊಂದು ಹಾಗೂ ಒಂದಕ್ಕೊಂದು ತಾಗಿ ಬಿದ್ದ ಪರಿಣಾಮ ಅಪಘಾತ ಸಂಭವಿಸಿದ ಸ್ಥಳದಲ್ಲಿ ವಿಲಕ್ಷಣ ಭಯಂಕರ ದೃಶ್ಯಗಳು ರಾಚುತ್ತಿದ್ದವು. ಒಂದು ಪ್ರಬಲ ಚಂಡಮಾರುತವು ಬೋಗಿಗಳಿಗೆ ಅಪ್ಪಳಿಸಿ ಅವುಗಳನ್ನು ಒಂದರ ಮೇಲೊಂದು ಎಸೆಯಲಾಗಿದೆಯೇ ಎನ್ನುವ ರೀತಿಯಲ್ಲಿ ಘಟನಾ ಸ್ಥಳ ಕಾಣುತ್ತಿತ್ತು. 'ಒಂದು ಪ್ರದೇಶದ ಮೂಲಕ ಹಲವು ಹಳಿಗಳು ಹಾಯ್ದುಹೋಗಿವೆ. ಹೀಗಾಗಿ ಅಪಘಾತದಿಂದಾಗಿ ಸಂತ್ರಸ್ತರಾದವರ ಸಂಖ್ಯೆ ಹೆಚ್ಚಿದೆ. ರಕ್ಷಣಾ ಕಾರ್ಯವೂ ಸವಾಲಾಗಿ ಪರಿಣಮಿಸಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ. ಗಾಯಗೊಂಡವರನ್ನು ಆಸ್ಟತ್ರೆಗೆ ದಾಖಲಿಸಲಾಗುತ್ತಿದ್ದು ಬಾಲಸೋರ್ ಜಿಲ್ಲಾ ಆಸ್ಪತ್ರೆ ಮತ್ತು ಸೊರೊ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ಹೋಗಿವೆ. ಆಸ್ಟತ್ರೆಗಳ ಕೋಣೆಗಳಲ್ಲಿ ಜಾಗವಿಲ್ಲದೆ ಕಾರಿಡಾರ್‌ಗಳಲ್ಲಿಯೂ ಚಿಕಿತ್ಸೆ ನೀಡಲಾಗುತ್ತಿದೆ. 'ನಾನು ಕೆಲ ದಶಕಗಳಿಂದ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವೆ. ಆದರೆ ಈ ರೀತಿಯ ಸಂಪೂರ್ಣ ಅಸ್ತವ್ಯಸ್ತ ಸ್ಥಿತಿಯನ್ನು ನನ್ನ ವೃತ್ತಿ ಜೀವನದಲ್ಲಿಯೇ ನೋಡಿಲ್ಲ' ಎಂದು ಹೆಚ್ಚುವರಿ ಜಿಲ್ಲಾ ವೈದ್ಯಾಧಿಕಾರಿ ಡಾ.ಮೃತ್ಯುಂಜಯ ಮಿಶ್ರಾ ಹೇಳಿದರು. 'ದಿಢೀರ್‌ನೆ 251ಕ್ಕೂ ಗಾಯಾಳುಗಳನ್ನು ಆಸ್ಪತ್ರೆಗೆ ತರಲಾಯಿತು. ನಮ್ಮಲ್ಲಿ ಸಿದ್ಧತೆಯೇ ಇರಲಿಲ್ಲ. ಆದಾಗ್ಯೂ ನಮ್ಮ ಸಿಬ್ಬಂದಿ ರಾತ್ರಿಯಿಡೀ ಪ್ರಾಥಮಿಕ ಚಿಕಿತ್ಸೆ ನೀಡಿದರು' ಎಂದು ಹೇಳಿದರು. ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ- ಭುವನೇಶ್ವರದ ವೈದ್ಯರು ಬಾಲಸೋರ್ ಮತ್ತು ಕಟಕ್‌ಗೆ ತೆರಳಿ ಚಿಕಿತ್ಸೆಗೆ ನೆರವಾದರು. ಎರಡು ಸಾವಿರ ಜನರಿಂದ ರಕ್ತದಾನ! ಬಾಲಸೋರ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ಗಾಯಾಳುಗಳಿಗಾಗಿ ರಕ್ತ ನೀಡಲು ಎರಡು ಸಾವಿರದಷ್ಟು ಜನರು ಜಮಾಯಿಸಿದ್ದರು. ಪೊಲೀಸರು ಸೇರಿದಂತೆ ಸ್ಥಳೀಯರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಕಾಳಜಿ ಮೆರೆದಿದ್ದಾರೆ. 'ರಕ್ತದಾನ ಮಾಡಲು ಆಸ್ಪತ್ರೆಯ ಮುಂದೆ ಜಮಾಯಿಸಿದ್ದನ್ನು ಕಂಡು ಆಶ್ಚರ್ಯವಾಯಿತು. ದಾನಿಗಳಿಂದ 500 ಯುನಿಟ್ ರಕ್ತ ಸಂಗ್ರಹಿಸಲಾಗಿದೆ. ಇದು ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ದೊಡ್ಡ ಅನುಭವ' ಎಂದು ಡಾ.ಮೃತ್ಯುಂಜಯ ಮಿಶ್ರಾ ಹೇಳಿದರು.
Cut-off box - ರಕ್ಷಣಾ ಕಾರ್ಯದ ಈ ಪರಿ 200 ಆಂಬುಲೆನ್ಸ್‌ಗಳು 50 ಬಸ್‌ಗಳು 45 ಸಂಚಾರಿ ಆರೋಗ್ಯ ಘಟಕಗಳು 1200 ಸಿಬ್ಬಂದಿ