ಎರ್ನಾಕುಳಂ: ಎಸ್‍ಎಫ್‍ಐ ಮುಖಂಡ ನಿಖಿಲ್ ಥಾಮಸ್ ನಕಲಿ ಪದವಿ ಪ್ರಮಾಣಪತ್ರ ಪ್ರಕರಣದಲ್ಲಿ ಎರಡನೇ ಆರೋಪಿ ಅಬಿನ್ ಸಿ ರಾಜ್ ನನ್ನು ಬಂಧಿಸಲಾಗಿದೆ.
ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ಅಬಿಲ್ ನನ್ನು ಬಂಧಿಸಲಾಯಿತು. ಅಬಿನ್ ನನ್ನು ಕಾಯಂಕುಳಂ ಪೋಲೀಸ್ ಠಾಣೆಗೆ ಕರೆತರಲಾಯಿತು. ನಿಖಿಲ್ ಥಾಮಸ್‍ಗಾಗಿ ನಕಲಿ ಪ್ರಮಾಣಪತ್ರವನ್ನು ತಯಾರಿಸಿದ್ದಕ್ಕಾಗಿ ಅಬಿನ್‍ನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಈತ ಎಸ್‍ಎಫ್‍ಐನ ಮಾಜಿ ಪ್ರದೇಶಾಧ್ಯಕ್ಷ ಮತ್ತು ಜಿಲ್ಲಾ ಸದಸ್ಯನೂ ಆಗಿದ್ದ.
ನಕಲಿ ಪದವಿ ಪ್ರಮಾಣಪತ್ರ ತಯಾರಿಸಲು ಅಬಿನ್ ಸಹಾಯ ಮಾಡಿದ್ದ ಎಂದು ನಿಖಿಲ್ ಥಾಮಸ್ ಹೇಳಿಕೆ ನೀಡಿದ್ದ. ಮಾಲ್ಡೀವ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಅಬಿನ್ ನನ್ನು ಪೋಲೀಸರು ಒತ್ತಾಯಪೂರ್ವಕ ಕರೆತಂದಿದ್ದಾರೆ.
ಅಬಿನ್ ಸಿ ರಾಜ್ ಕೊಚ್ಚಿಯಲ್ಲಿರುವ ಓರಿಯನ್ ಏಜೆನ್ಸಿ ಮೂಲಕ ನಕಲಿ ಪ್ರಮಾಣಪತ್ರವನ್ನು ತಯಾರಿಸಿದ್ದಾನೆ. ನಿಖಿಲ್ ಥಾಮಸ್ ಅವರು ನಕಲಿ ಪ್ರಮಾಣಪತ್ರಕ್ಕಾಗಿ ಎರಡು ಲಕ್ಷ ರೂಪಾಯಿ ಖರ್ಚು ಮಾಡಿದ್ದೆ ಎಂದು ಹೇಳಿಕೆ ನೀಡಿದ್ದ. ನಂತರ ಅಬಿನ್ ನನ್ನು ಪ್ರಕರಣದಲ್ಲಿ ಎರಡನೇ ಆರೋಪಿಯನ್ನಾಗಿ ಮಾಡಲಾಯಿತು. ನಿನ್ನೆ ನಿಖಿಲ್ ಥಾಮಸ್ ನ ನಕಲಿ ಪ್ರಮಾಣಪತ್ರವನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ನಿಖಿಲ್ ಮನೆಯಲ್ಲಿ ಶೋಧ ನಡೆಸಿದಾಗ ಪ್ರಮಾಣಪತ್ರ ಪತ್ತೆಯಾಗಿದೆ.