ಪಾಲಕ್ಕಾಡ್:ತಾಯಿ ಆನೆ ಹಾಗೂ ಆನೆ ಹಿಂಡಿನಿಂದ ಬೇರ್ಪಟ್ಟ 2 ವಾರಗಳಲ್ಲಿ ಆನೆ ಮರಿ ಸಾವನ್ನಪ್ಪಿರುವ ಘಟನೆ ಕೇರಳದ ಅಟ್ಟಪಾಡಿ ಅರಣ್ಯ ಶ್ರೇಣಿಯಲ್ಲಿ ವರದಿಯಾಗಿದೆ.
1.6 ವರ್ಷದ ಆನೆ ಮರಿ ಮೃತಪಟ್ಟಿದ್ದು, ಇದಕ್ಕೆ ಸೂಕ್ತ ಕಾರಣ ಏನೆಂದು ಈ ವರೆಗೂ ತಿಳಿದುಬಂದಿಲ್ಲ. ಆನೆ ಮರಿ ಸಾವನ್ನಪ್ಪುವುದಕ್ಕೆ ಕಾರಣ ಏನೆಂದು ತಿಳಿಯುವುದಕ್ಕಾಗಿ ಮರಣೋತ್ತರ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ಅರಣ್ಯ ಅಧಿಕಾರಿ ಹೇಳಿದ್ದಾರೆ.
ಕಳೆದ 2 ವಾರಗಳಿಂದ ಆನೆ ಮರಿಯ ಆರೈಕೆ ಮಾಡುತ್ತಿದ್ದ ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ, ಸೋಂಕಿನಿಂದ ಬಳಲುತ್ತಿದ್ದುದ್ದೇ ಇದಕ್ಕೆ ಕಾರಣ ಇರಬಹುದು ಎಂದು ಹೇಳಿದ್ದಾರೆ.
ಜೂ.26 ರಂದು ಆನೆ ಮರಿ ಆರೋಗ್ಯಕರವಾಗಿಯೇ ಇತ್ತು. ಆದರೆ ಏಕಾ ಏಕಿ ದುರ್ಬಲಗೊಂಡ ಪರಿಣಾಮ ಚಿಕಿತ್ಸೆ ನೀಡಿದ್ದೆವು. ಆ ನಂತರವೂ ಸ್ವಲ್ಪ ಚೇತರಿಸಿಕೊಂಡಿತ್ತು. ಆದರೆ ಮಂಗಳವಾರ ಮಧ್ಯಾಹ್ನ ಮತ್ತೆ ನಿತ್ರಾಣಗೊಂಡು ಸಾವನ್ನಪ್ಪಿತು ಎಂದು ಹೇಳಿದ್ದಾರೆ. "ಇದು ಬಹುಶಃ ಹುಟ್ಟಿನಿಂದಲೇ ಸಮಸ್ಯೆಗಳನ್ನು ಹೊಂದಿತ್ತು, ಇದು ಅದರ ಹಿಂಡಿನಿಂದ ಕೈಬಿಡಲ್ಪಟ್ಟಿದ್ದಕ್ಕೆ ಕಾರಣವಾಗಿರಬಹುದು" ಎಂದು ಅವರು ಹೇಳಿದರು.