ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ತಮ್ಮ ಮನೆಯಿಂದ 50 ಮೀಟರ್ ದೂರದಲ್ಲಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ನಲ್ಲಿ ಸಹೋದರ ಮತ್ತು ಸಹೋದರಿ ಸೇರಿದಂತೆ ಮೂವರು ಮಕ್ಕಳು ಭಾನುವಾರ ಸಂಜೆ ಶವವಾಗಿ ಪತ್ತೆಯಾಗಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದು ಫಾರೂಕ್ ನಗರದ ನಿವಾಸಿಗಳಾದ ತೌಫಿಕ್ ಫಿರೋಜ್ ಖಾನ್ (4), ಅಲಿಯಾ ಫಿರೋಜ್ ಖಾನ್ (6) ಮತ್ತು ಅಫ್ರೀನ್ ಇರ್ಷಾದ್ ಖಾನ್ (6) ಶನಿವಾರ ಮಧ್ಯಾಹ್ನ ನಾಪತ್ತೆಯಾಗಿದ್ದರು.
ಸಮೀಪದ ಮೈದಾನದಲ್ಲಿ ಆಟವಾಡಲು ಹೋಗಿದ್ದಾರೆ ಎಂದು ಮಕ್ಕಳ ಪೋಷಕರು ಭಾವಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಶನಿವಾರ ಸಂಜೆಯಾದರೂ ಮಕ್ಕಳು ವಾಪಸ್ ಬಾರದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿ ಅಪಹರಣ ಪ್ರಕರಣ ದಾಖಲಿಸಿದ್ದರು. ಭಾನುವಾರ ಸಂಜೆ 7 ಗಂಟೆ ಸುಮಾರಿಗೆ, ಕಾನ್‌ಸ್ಟೆಬಲ್‌ಯೊಬ್ಬರು ತಮ್ಮ ಮನೆಗಳ ಬಳಿ ಎಸ್‌ಯುವಿ ನಿಲ್ಲಿಸಿರುವುದನ್ನು ನೋಡಿದಾಗ ಅದರೊಳಗೆ ಮೂವರು ಮಕ್ಕಳ ಶವಗಳು ಪತ್ತೆಯಾಗಿವೆ.
ತೌಫಿಕ್ ಮತ್ತು ಆಲಿಯಾ ಒಡಹುಟ್ಟಿದವರಾಗಿದ್ದು, ಅಫ್ರೀನ್ ಸಮೀಪದಲ್ಲಿ ವಾಸಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಕ್ಕಳ ಸಾವಿನ ಹಿಂದಿನ ಕಾರಣವನ್ನು ಮರಣೋತ್ತರ ಪರೀಕ್ಷೆಯ ವರದಿಯಿಂದ ಬಹಿರಂಗಪಡಿಸಲಾಗುವುದು ಎಂದು ನಾಗ್ಪುರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ. ಸದ್ಯ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಅದೇ ಸಮಯದಲ್ಲಿ, ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರು ನಾಪತ್ತೆಯಾದ ಮಕ್ಕಳ ಶವಗಳು ಅವರ ಮನೆಯ ಸಮೀಪ ನಿಲ್ಲಿಸಿದ್ದ ಹಳೆಯ ಕಾರಿನಲ್ಲಿ ಪತ್ತೆಯಾಗಿವೆ ಎಂದು ಹೇಳಿದ್ದಾರೆ. ಮೂವರು ಮಕ್ಕಳು ಆಟವಾಡುತ್ತಾ ಕಾರಿನಲ್ಲಿ ಕುಳಿತು ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾರೆ. ಹೀಗಾಗಿ ಅವರು ನಾಪತ್ತೆಯಾಗಿದ್ದಾರೆ ಎಂದು ಪೋಷಕರು ಭಾವಿಸಿದ್ದರು. ಇನ್ನು ಕಾರಿನಲ್ಲಿ ಹತ್ತಿದ್ದ ಮೂವರೂ ಶಾಖ ಮತ್ತು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದರು ಎಂದು ಹೇಳಿದ್ದಾರೆ.