ನವದೆಹಲಿ: 'ಪ್ರಿಡೇಟರ್' ಎಂದು ಗುರುತಿಸುವ, ಕಡಲಗಡಿಯಲ್ಲಿ ಕಣ್ಗಾವಲು ಇಡುವ ಶಸ್ತ್ರಸಜ್ಜಿತ 'ಎಂಕ್ಯೂ 9ಬಿ' ಹೆಸರಿನ 30 ಡ್ರೋನ್ ಖರೀದಿಸುವ ಪ್ರಸ್ತಾವಕ್ಕೆ ರಕ್ಷಣಾ ಸಚಿವಾಲಯ ಗುರುವಾರ ಅನುಮೋದನೆ ನೀಡಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ರಕ್ಷಣಾ ಸ್ವಾದೀನ ಮಂಡಳಿ (ಡಿಎಸಿ) ಸಭೆ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿತು.
ಅಮೆರಿಕದ ಜನರಲ್ ಅಟೊಮಿಕ್ಸ್ ಸಂಸ್ಥೆ ಜೊತೆಗಿನ ಈ ವಹಿವಾಟು ಕಾರ್ಯಗತಗೊಂಡರೆ, ನ್ಯಾಟೊ ಸಮೂಹ ಹೊರತುಪಡಿಸಿ ಅಮೆರಿಕದಿಂದ ಇಂತಹ ಶಸ್ತ್ರಾಸ್ತ್ರ ಪಡೆಯಲಿರುವ ಮೊದಲ ರಾಷ್ಟ್ರ ಭಾರತವಾಗಲಿದೆ. ಈ ವಹಿವಾಟಿನ ಮೊತ್ತ ಸುಮಾರು ₹ 24 ಸಾವಿರ ಕೋಟಿ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ಅವಧಿಯಲ್ಲಿ ಸೇನಾ ಒಪ್ಪಂದ ಏರ್ಪಡಲಿರುವ ಎರಡು ಮುಖ್ಯ ವಹಿವಾಟಿನಲ್ಲಿ ಪ್ರಿಡೇಟರ್ ಖರೀದಿಯೂ ಒಂದಾಗಿದೆ. ಮತ್ತೊಂದು ಭಾರತದಲ್ಲಿಯೇ ಎಫ್-414 ಎಂಜಿನ್‌ಗಳನ್ನು ತಯಾರಿಸುವ ಕುರಿತು ಜನರಲ್ ಎಲೆಕ್ಟ್ರಿಕ್ ಕಂಪನಿ ಜೊತೆಗೆ ಒಪ್ಪಂದಕ್ಕೆ ಬರುವುದಾಗಿದೆ.
ಗುರುವಾರ ಡಿಎಸಿಯ ಎರಡು ಉನ್ನತಾಧಿಕಾರ ಸಭೆಗಳು ನಡೆದವು. ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲಿವಾನ್, ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರೂ ಭಾಗವಹಿಸಿದ್ದರು.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ, ಪ್ರಧಾನಮಂತ್ರಿ ಕಚೇರಿಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ ಈ ಉದ್ದೇಶಿತ ವಹಿವಾಟುಗಳಿಗೆ ಅಂತಿಮ ರೂಪ ನೀಡಲು ಶೀಘ್ರದಲ್ಲಿಯೇ ವಾಷಿಂಗ್ಟನ್ ಡಿ.ಸಿ.ಗೆ ಭೇಟಿ ನೀಡಲಿದ್ದಾರೆ.
ಈ ಪ್ರಸ್ತಾವದ ಪ್ರಕಾರ, ನೌಕಾಪಡೆಗೆ ಇಂತಹ 14 ಶಸ್ತ್ರಸಜ್ಜಿತ ಡ್ರೋನ್, ವಾಯುಪಡೆ ಮತ್ತು ಸೇನೆಗೆ ತಲಾ 8 ಡ್ರೋನ್ ಪಡೆಯಲಿವೆ. ಭಾರತ ನೌಕಾಪಡೆಯು ಪ್ರಸ್ತುತ ಎರಡು ಶಸ್ತ್ರಾಸ್ತ್ರರಹಿತ ಕಡಲು ಕಣ್ಗಾವಲು ಡ್ರೋನ್‌ಗಳನ್ನು ಗಸ್ತು ಚಟುವಟಿಕೆಗೆ ಬಳಸುತ್ತಿದೆ. ಇವುಗಳನ್ನೂ ಜನಲರ್ ಆಟೊಮಿಕ್ಸ್ ಸಂಸ್ಥೆಯಿಂದ ಗುತ್ತಿಗೆ ಆಧಾರದಲ್ಲಿ ಪಡೆಯಲಾಗಿದೆ.
ಈಗ ಖರೀದಿಸಲು ಉದ್ದೇಶಿಸಿರುವ ಶಸ್ತ್ರಾಸ್ತ್ರ ಸಜ್ಜಿತ ಡ್ರೋನ್‌ಗಳು ಹೆಚ್ಚಿನ ಸಾಮರ್ಥ್ಯ ಉಳ್ಳದ್ದಾಗಿದ್ದು, ಆಗಸದಲ್ಲಿಯೇ ಸತತ 35 ಗಂಟೆ ಕಾರ್ಯನಿರ್ವಹಿಸಬಲ್ಲದ್ದಾಗಿದೆ. ಸುಮಾರು 450 ಕೆ.ಜಿ. ತೂಕದ ನಾಲ್ಕು ಕ್ಷಿಪಣಿಗಳನ್ನು ಒಯ್ಯಬಹುದಾಗಿದೆ.
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಭಾರತದ ಜೊತೆಗೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಾಣಿಜ್ಯ ವಹಿವಾಟು ನಡೆಸಲು ಹೆಚ್ಚಿನ ಒತ್ತು ನೀಡಿದ್ದಾರೆ. ಹಿಂದೂ ಮಹಾಸಾಗರ ವಲಯದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚಾಗುತ್ತಿದೆ ಎಂಬ ಬೆಳವಣಿಗೆಯ ಹಿನ್ನೆಲೆಯಲ್ಲಿ ಇದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.