ಕಾಸರಗೋಡು: ನಗರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮತ್ತೆ ಅನಧಿಕೃತ ಸಾಗಾಟದ ಹಣ ಪತ್ತೆಹಚ್ಚಲಾಗಿದೆ. ಡಿವೈಎಸ್‍ಪಿ ಸುಧಾಕರನ್ ನೇತೃತ್ವದ ಪೊಲೀಸರ ತಂಡ ವಿದ್ಯಾನಗರ ಸನಿಹದ ನೆಲ್ಕಳದಲ್ಲಿ ಕಾರ್ಯಾಚರಣೆ ನಡೆಸಿ ಭರೋಬ್ಬರಿ 30.50ಲಕ್ಷ ರೂ. ಕಾಳಧನ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಒಬ್ಬನನ್ನು ಬಂಧಿಸಿದ್ದಾರೆ. ಚೆಮ್ನಾಡ್ ನಿವಾಸಿ ಹಬೀಬ್ ಬಂಧಿತ. ಖಚಿತ ಸುಳಿವಿನ ಮೇರೆಗೆ ನಗರ ಠಾಣೆ ಇನ್ಸ್‍ಪೆಕ್ಟರ್ ಅಜಿತ್‍ಕುಮಾರ್ ನೇತೃತ್ವದ ಪೊಲೀಸರ ತಂಡ ನೆಲ್ಕಳದಲ್ಲಿ ಸ್ಕೂಟರನ್ನು ತಡೆದು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ಆರೋಪಿಯನ್ನು ಸಮಗ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಕಳೆದ 15ದಿವಸಗಳೊಳಗೆ ಕಾಳಧನ ಪತ್ತೆಹಚ್ಚಿದ ಮೂರನೇ ಪ್ರಕರಣ ಇದಾಗಿದೆ. ಮೇ 17ರಂದು ಚಂದ್ರಗಿರಿ ರಸ್ತೆಯಲ್ಲಿ ಬೈಕಲ್ಲಿ ಸಾಗಿಸುತ್ತಿದ್ದ 30ಲಕ್ಷ ರೂ. ಕಾಳಧನ ಪತ್ತೆಹಚ್ಚಿ, ಚೇರೂರು ನಿವಾಸಿ ಎಂ.ಕೆ ಅಬ್ದುಲ್ ಖಾದರ್ ಹಾಗೂ ಮಹಸೂಪ್ ಎಂಬವರನ್ನು ಬಂಧಿಸಲಾಗಿತ್ತು. ಅದೇ ದಿನ ಕೋಟೆಕಣಿ ರಸ್ತೆಯಲ್ಲಿ ಇನ್ನೊಂದು ಬೈಕಲ್ಲಿ ಸಾಗಿಸುತ್ತಿದ್ದ 18.80ಲಕ್ಷ ರೂ. ಪತ್ತೆಹಚ್ಚಿ, ನಾಯಮರ್‍ಮೂಲೆ ನಿವಾಸಿ ಎಂ.ಕೆ ರಹಮಾನ್ ಎಂಬಾತನನ್ನು ಬಂಧಿಸಲಾಗಿತ್ತು. ಇನ್ನು ಪೊಲೀಸರ ಕಣ್ತಪ್ಪಿಸಿ ಲಕ್ಷಾಂತರ ರೂ. ಕಾಳಧನ ರವಾನೆಯಾಗುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಿಂದ ಕಾಳಧನ, ಹವಾಲಾ, ಚಿನ್ನ ಕಳ್ಳಸಾಗಾಟ ಪ್ರಕರಣಗಳು ಭಾರಿ ಪರಮಾಣದಲ್ಲಿ ಹೆಚ್ಚುತ್ತಿರುವುದು ಆತಂಕಕ್ಕೂ ಕಾರಣವಾಗಿದೆ.