ಇಂಫಾಲ್: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ತಡೆಯಲು ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಇನ್ನೂ ಐದು ದಿನಗಳವರೆಗೆ ವಿಸ್ತರಿಸಿ ಭಾನುವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಜನಾಂಗೀಯ ಘರ್ಷಣೆಗಳು ಮತ್ತು ಹಿಂಸಾಚಾರದಿಂದ ತತ್ತರಿಸಿರುವ ಈಶಾನ್ಯ ರಾಜ್ಯದಲ್ಲಿ "ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ತಡೆಯಲು ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಜೂನ್ 30 ರಂದು ಮಧ್ಯಾಹ್ನ 3 ರವರೆಗೆ ವಿಸ್ತರಿಸಲಾಗಿದೆ.
"ನಿರಂತರ ಅಶಾಂತಿ"ಯಿಂದಾಗಿ ರಾಜ್ಯದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ವಿಸ್ತರಿಸಲಾಗಿದೆ ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ.
ಹಿಂಸಾಚಾರ, ದಾಳಿಗಳು ಮತ್ತು ಗುಂಡಿನ ಚಕಮಕಿ ಸೇರಿದಂತೆ ಮನೆ ಮತ್ತು ಆವರಣಗಳಿಗೆ ಬೆಂಕಿ ಹಚ್ಚುವ ಘಟನೆಗಳು ಇನ್ನೂ ವರದಿಯಾಗುತ್ತಿವೆ ಎಂದು ಮಣಿಪುರದ ಪೊಲೀಸ್ ಮಹಾನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಕೆಲವು ಸಮಾಜ ವಿರೋಧಿ ಶಕ್ತಿಗಳು, ಸಾಮಾಜಿಕ ಮಾಧ್ಯಮವನ್ನು ದ್ವೇಷ ಭಾಷಣ ಮತ್ತು ದ್ವೇಷದ ವಿಡಿಯೋ ಸಂದೇಶಗಳ ಪ್ರಸಾರಕ್ಕಾಗಿ ವ್ಯಾಪಕವಾಗಿ ಬಳಸಬಹುದೆಂಬ ಆತಂಕವಿದೆ. ಇದು ಸಾರ್ವಜನಿಕರನ್ನು ಪ್ರಚೋದಿಸುತ್ತದೆ. ಹೀಗಾಗಿ ಇಂಟರ್ನೆಟ್ ನಿಷೇಧ ವಿಸ್ತರಿಸಲಾಗಿದೆ" ಎಂದು ಪ್ರಕಟಣೆ ತಿಳಿಸಿದೆ.