ಮುಂಬೈ: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಮೂವತ್ತು ವರ್ಷದ ಹಿಂದೆ ತಾನು ಮಾಡಿದ 'ಜೋಡಿ ಕೊಲೆ' ರಹಸ್ಯವನ್ನು ಬಹಿರಂಗಗೊಳಿಸಿದ್ದು, ಇದೀಗ ಶಿಕ್ಷೆಗೆ ಒಳಗಾಗಿದ್ದಾನೆ.
1993ರಲ್ಲಿ ಮುಂಬೈನ ಲೋನಾವಾಲಾ ಎಂಬಲ್ಲಿ ವೃದ್ದ ದಂಪತಿಗಳ ಬರ್ಬರ ಹತ್ಯೆ ನಡೆದಿತ್ತು.
ಸ್ವಲ್ಪ ವರ್ಷಗಳ ನಂತರ ಮಹಾರಾಷ್ಟ್ರದ ಔರಂಗಾಬಾದ್‌ಗೆ ತೆರಳಿದ ಅವಿನಾಶ್ ಪವಾರ್, ಅಲ್ಲಿ ಅಮಿತ್ ಪವಾರ್ ಎಂಬ ಹೆಸರಿನಲ್ಲಿ ಚಾಲನಾ ಪರವಾನಗಿ ಪಡೆಯುತ್ತಾನೆ. ವಿಕ್ರೋಲಿಯಲ್ಲಿ ನೆಲೆಸಿದ ಅವಿನಾಶ್ ತನ್ನ ಹೊಸ ಹೆಸರಿನಲ್ಲಿ ಆಧಾರ್ ಕಾರ್ಡ್ ಪಡೆಯುತ್ತಾನೆ. ಅಲ್ಲೇ ಒಬ್ಬ ಹುಡುಗಿಯನ್ನು ಮದುವೆಯಾಗಿ ಕುಟುಂಬ ಸಮೇತ ನೆಲಸುತ್ತಾನೆ.
ಕೊಲೆ ನಡೆದು ಮೂವತ್ತು ವರ್ಷವಾದರೂ ತಾನು ಪೊಲೀಸರ ಕೈಗೆ ಸಿಗಲಿಲ್ಲವಲ್ಲ ಎಂದು ಕೊಂಡ ಅವಿನಾಶ್ ಇನ್ನು ಮುಂದೆ ತಾನು ಪೊಲೀಸರ ಕೈಗೆ ಸಿಗಲು ಸಾಧ್ಯವೇ ಇಲ್ಲ ಎಂಬ ಧೃಡ ನಂಬಿಕೆಯಲ್ಲಿರುತ್ತಾನೆ. ಈ ಅತಿಯಾದ ನಂಬಿಕೆಯೇ ಅವಿನಾಶ್‌ಗೆ ಮುಳುವಾಗಿದೆ. ಕುಡಿದ ಮತ್ತಿನಲ್ಲಿ ವೃದ್ದ ದಂಪತಿ ಮನೆ ದರೋಡೆ ಮಾಡಿ ಕೊಲೆ ಮಾಡಿರುವ ಬಗ್ಗೆ ಸ್ನೇಹಿತರ ಮುಂದೆ ಬಾಯ್ಬಿಟ್ಟಿದ್ದಾನೆ. ಈ ವಿಷಯ ಪೊಲೀಸರಿಗೆ ತಿಳಿದು ಶುಕ್ರವಾರ ಅವಿನಾಶ್‌ನನ್ನು ವಿಕ್ರೋಲಿಯಲ್ಲಿ ಬಂಧಿಸಿದ್ದಾರೆ.
'ಅವಿನಾಶ್ ಪವಾರ್ 30 ವರ್ಷಗಳ ಹಿಂದೆ ಲೋನಾವಾಲಾದಲ್ಲಿ ನಡೆದ ಜೋಡಿ ಕೊಲೆಯ ಆರೋಪಿಯಾಗಿದ್ದು, ಕೊಲೆ ಮಾಡಿ ತಲೆಮರೆಸಿಕೊಂಡಿದ್ದನು. ವೃದ್ದ ದಂಪತಿಗಳು ಅವಿನಾಶ್ ಮನೆಯ ಸಮೀಪ ಅಂಗಡಿ ಹೊಂದಿದ್ದು, ಅವರ ಮನೆ ದರೋಡೆ ಮಾಡಲು ಅವಿನಾಶ್ ಯೋಜಿಸಿದ್ದನು. ದರೋಡೆ ಸಮಯ ವೃದ್ಧ ದಂಪತಿಯನ್ನು ಕೊಂದು ಪರಾರಿಯಾಗಿದ್ದನು. ಇದೀಗ 30 ವರ್ಷಗಳ ನಂತರ ಆರೋಪಿ ನಮ್ಮ ಕೈಗೆ ಸಿಕ್ಕಿದ್ದಾನೆ' ಎಂದು ಉಪ ಪೊಲೀಸ್ ಆಯುಕ್ತ (ಮುಂಬೈ ಕ್ರೈಂ ಬ್ರಾಂಚ್) ರಾಜ್ ತಿಲಕ್ ರೋಷನ್ ಹೇಳಿದ್ದಾರೆ.