ಹಲೋಲ್ : ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಹಲೋಲ್ ಪಟ್ಟಣದಲ್ಲಿ 2002ರಲ್ಲಿ ಗೋಧ್ರಾ ಗಲಭೆ ನಂತರ ನಡೆದಿದ್ದ ನಾಲ್ಕು ಪ್ರತ್ಯೇಕ ಹಿಂಸಾಚಾರ ಪ್ರಕರಣಗಳ ಎಲ್ಲ 35 ಜನರನ್ನು ನ್ಯಾಯಾಲಯ ಆರೋಪಗಳಿಂದ ಮುಕ್ತಗೊಳಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ಷ ತ್ರಿವೇದಿ ಅವರು ಈ ಸಂಬಂಧ ಜೂನ್ 12ರಂದು ಆದೇಶ ಹೊರಡಿಸಿದ್ದು, ಗುರುವಾರ ಆದೇಶದ ಪ್ರತಿ ಲಭ್ಯವಾಗಿದೆ. ಈ ಘಟನೆಗಳಲ್ಲಿ ಮೂವರು ಮೃತಪಟ್ಟಿದ್ದರು.
'ಹುಸಿ ಜಾತ್ಯತೀತ ಮಾಧ್ಯಮಗಳು ಹಾಗೂ ರಾಜಕಾರಣಿಗಳು ಈ ಗಲಭೆಗಳು ಪೂರ್ವಯೋಜಿತ ಎಂಬುದಾಗಿ ಬಿಂಬಿಸಿದ್ದವು' ಎಂದು ನ್ಯಾಯಾಧೀಶರು ಆದೇಶದಲ್ಲಿ ಟೀಕಿಸಿದ್ದಾರೆ.
'2002ರ ಫೆಬ್ರುವರಿ 28ರಂದು ಕಲೋಲ್‌ನ ಬಸ್ ನಿಲ್ದಾಣ, ದೇಲೋಲ್ ಗ್ರಾಮ ಹಾಗೂ ದೇರೋಲ್ ರೈಲು ನಿಲ್ದಾಣ ಸಮೀಪದ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ, ಈ 35 ಮಂದಿ ಕೊಲೆ ಹಾಗೂ ಗಲಭೆಗಳಲ್ಲಿ ತೊಡಗಿದ್ದರು' ಎಂದು ಆರೋಪಿಸಲಾಗಿತ್ತು.
'ಈ ಹಿಂಸಾಚಾರದಲ್ಲಿ ಮೂವರನ್ನು ಹರಿತವಾದ ಆಯುಧಗಳಿಂದ ಕೊಲೆ ಮಾಡಿ, ಸಾಕ್ಷ್ಯಗಳನ್ನು ನಾಶಪಡಿಸುವ ಉದ್ದೇಶದಿಂದ ಮೃತದೇಹಗಳನ್ನು ಸುಟ್ಟು ಹಾಕಿದ್ದರು' ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.
ಆದರೆ, ಆರೋಪಿಗಳ ವಿರುದ್ಧ ಸಮರ್ಪಕ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
'ಕೋಮು ಗಲಭೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಪೊಲೀಸರು ಎರಡೂ ಸಮುದಾಯಗಳಿಗೆ ಸೇರಿದ ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಆದರೆ, ಯಾರು ತಪ್ಪು ಮಾಡಿದ್ದಾರೆ ಎಂದು ನಿರ್ಧರಿಸುವ ಕೆಲಸ ನ್ಯಾಯಾಲಯದ್ದು. ಯಾರಿಂದ ಅಪರಾಧವಾಗಿದೆ ಎಂಬುದನ್ನು ಪೊಲೀಸರು ಪತ್ತೆ ಮಾಡಿಲ್ಲ ಎಂಬ ಕಾರಣಕ್ಕೆ ನ್ಯಾಯಾಲಯ ತನ್ನ ಕರ್ತವ್ಯದಿಂದ ನುಣುಚಿಕೊಳ್ಳಲಾಗದು' ಎಂದು ನ್ಯಾಯಾಧೀಶ ತ್ರಿವೇದಿ ಅವರು ಆದೇಶದಲ್ಲಿ ಹೇಳಿದ್ದಾರೆ.
'ಗುಜರಾತ್ ಜನರು ಶಾಂತಿಪ್ರಿಯರು. 2002ರ ಫೆಬ್ರುವರಿ 27ರಂದು ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಘಟನೆಯಿಂದಾಗಿ ಘಾಸಿಗೊಂಡಿದ್ದರು. ಆದರೆ, ಹುಸಿ ಜಾತ್ಯತೀತ ಮಾಧ್ಯಮಗಳು ಹಾಗೂ ರಾಜಕಾರಣಿಗಳಿಂದ ಈ ಗಾಯಕ್ಕೆ ಉಪ್ಪು ಸವರುವ ಕೆಲಸ ನಡೆಯಿತು' ಎಂದು ಅವರು ಟೀಕಿಸಿದ್ದಾರೆ.
'ಗೋಧ್ರೋತ್ತರ ಗಲಭೆಯಲ್ಲಿ ಗುಜರಾತ್‌ನ 24 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಉದ್ರಿಕ್ತ ಗುಂಪಿನಲ್ಲಿ 2 ಸಾವಿರದಿಂದ 3 ಸಾವಿರ ಜನರಿದ್ದರು. ಕೆಲವೆಡೆ 5 ಸಾವಿರದಿಂದ 10 ಸಾವಿರದಷ್ಟು ಜನರಿದ್ದ ಗುಂಪುಗಳು ಗಲಭೆಯಲ್ಲಿ ತೊಡಗಿದ್ದವು. ಈ ಗಲಭೆಗಳು ಹಠಾತ್ತಾಗಿ ಭುಗಿಲೆದ್ದಿದ್ದವು. ಹುಸಿ ಜಾತ್ಯತೀತ ವ್ಯಕ್ತಿಗಳು ವಿವರಿಸಿದಂತೆ ಪೂರ್ವಯೋಜಿತ ಕೃತ್ಯಗಳಾಗಿರಲಿಲ್ಲ' ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣಗಳ ವಿವರ: ಕಲೋಲ್ ಪಟ್ಟಣ ಮತ್ತು ಇತರ ಎರಡು ಪ್ರದೇಶಗಳಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಸಂಘರ್ಷ ಆರಂಭಗೊಂಡಿತು. ಈ ವೇಳೆ, ಮುಸ್ಲಿಂ ಸಮುದಾಯಕ್ಕೆ ಸೇರಿದ ಮೂವರು ನಾಪತ್ತೆಯಾಗಿದ್ದರು. ಕೆಲ ದಿನಗಳ ನಂತರ ಈ ಮೂವರ ಮೃತದೇಹಗಳು ಪತ್ತೆಯಾದವು ಎಂದು ಆರೋಪಿಸಲಾಗಿತ್ತು.
ಈ ಗಲಭೆ ಪ್ರಕರಣಗಳಿಗೆ ಸಂಬಂಧಿಸಿ ಒಟ್ಟು 52 ಜನರ ವಿರುದ್ಧ ಗಲಭೆ, ಕಾನೂನುಬಾಹಿರವಾಗಿ ಒಂದು ಸ್ಥಳದಲ್ಲಿ ಸೇರುವುದು, ಕೊಲೆಗೆ ಸಂಬಂಧಿಸಿದ ಸೆಕ್ಷನ್‌ಗಳಡಿ ದೋಷಾರೋಪ ಹೊರಿಸಲಾಗಿತ್ತು. ನಂತರ, ಕಲೋಲ್, ಹಲೋಲ್ ಹಾಗೂ ಗೋಧ್ರಾ ಜೈಲುಗಳಲ್ಲಿ ಇರಿಸಲಾಗಿತ್ತು.