ಗುವಾಹಟಿ: ಭಾರಿ ಮಳೆಯ ಪರಿಣಾಮ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಶನಿವಾರ ಗಂಭೀರವಾಗಿದ್ದು, ಇದುವರೆಗೆ 4.88 ಲಕ್ಷ ಜನರು ತೊಂದರೆಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದೆಲ್ಲೆಡೆ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದ್ದು, ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವೆಡೆ ಭೂಕುಸಿತ ಸಂಭವಿಸಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.
ಅಸ್ಸಾಂನಲ್ಲಿ ಪ್ರವಾಹಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ಪ್ರವಾಹಪೀಡಿತ ಸ್ಥಳದಲ್ಲಿರುವ ಸುಮಾರು 4.88 ಲಕ್ಷ ಜನರ ಬದುಕು ಡೋಲಾಯಮಾನವಾಗಿದೆ. ಬ್ರಹ್ಮಪುತ್ರ ಸೇರಿದಂತೆ ರಾಜ್ಯದ ಪ್ರಮುಖ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಈವರೆಗೆ 19 ಜಿಲ್ಲೆಗಳು, ನಾಲ್ಕು ಉಪ ವಿಭಾಗಗಳು ಸಂಪೂರ್ಣವಾಗಿ ಪ್ರವಾಹಪೀಡಿತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರಿ ಮಳೆಯು ಕೆಲ ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
35,000ಕ್ಕೂ ಹೆಚ್ಚು ಜನರು 140 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ, ಸರ್ಕಾರೇತರ ಸಂಘಟನೆಗಳು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಹರಿಯಾಣ, ಪಂಜಾಬ್‌ನಲ್ಲಿ ಮಳೆ
ಚಂಡೀಗಢ: ಹರಿಯಾಣ, ಪಂಜಾಬ್‌ನ ಕೆಲವು ಭಾಗಗಳಲ್ಲಿ ಶುಕ್ರವಾರ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹರಿಯಾಣದ ಅಂಬಾಲ, ಕರ್ನಾಲ್, ರೋಹ್ಟಕ್, ಪಂಚಕುಲಾ, ಕುರುಕ್ಷೇತ್ರ ಮತ್ತು ಫತೇಹಬಾದ್‌ನಲ್ಲಿ ಮಳೆಯಾಗಿದೆ. ಪಂಜಾಬ್‌ನ ಫತೇಗಢ ಸಾಹಿಬ್, ಎಸ್‌ಬಿಎಸ್ ನಗರ ಮತ್ತು ರೂಪ್‌ನಗರ ಸಾಧಾರಣ ಮಳೆಯಾಗಿದೆ ಎಂದು ತಿಳಿಸಿದ್ದಾರೆ. ಹಲವು ದಿನಗಳಿಂದ ಎರಡೂ ರಾಜ್ಯಗಳಲ್ಲಿ ಬಿಸಿಲ ಧಗೆ ಹೆಚ್ಚಾಗಿತ್ತು.