ಜಮ್ಮು: 'ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಯನ್ನು ರದ್ದುಪಡಿಸಿದಾಗಿನಿಂದಲೂ ಜನರು ಸಂತಸದಿಂದಿದ್ದಾರೆ' ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಗುರುವಾರ ಇಲ್ಲಿ ಹೇಳಿದರು.
ಜಮ್ಮು ವಿಶ್ವವಿದ್ಯಾಲಯದ ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, 'ಸಂವಿಧಾನದ ಕರಡು ರಚಿಸುವಾಗಲೇ ಅಂಬೇಡ್ಕರ್ 370ನೇ ವಿಧಿ ಸೇರ್ಪಡೆಗೆ ನಿರಾಕರಿಸಿದ್ದರು.
'ಅಂಬೇಡ್ಕರ್ ಸಂವಿಧಾನಕ್ಕೆ ಸೇರ್ಪಡೆಗೊಳಿಸಲು ನಿರಾಕರಿಸಿದ್ದ 370ನೇ ವಿಧಿ ಇದೀಗ ಅಸ್ತಿತ್ವದಲ್ಲಿಲ್ಲ ಎಂದು ಹೇಳಲು ಸಂತೋಷವಾಗುತ್ತದೆ' ಎಂದು ಧನಕರ್ ತಿಳಿಸಿದರು.
'ದೇಶವೊಂದು ಎರಡು ಲಾಂಛನ, ಇಬ್ಬರು ನಾಯಕರನ್ನು ಹೊಂದುವುದು ಸಾಧ್ಯವಿಲ್ಲ' ಎಂದು ಶ್ಯಾಮ್ ಪ್ರಸಾದ್ ಮುಖರ್ಜಿ ಹೇಳಿದ್ದ ಮಾತುಗಳನ್ನು ನೆನಪು ಮಾಡಿಕೊಂಡ ಉಪರಾಷ್ಟ್ರಪತಿ, 'ಜೂನ್ 23ರಂದು ಹುತಾತ್ಮರ ದಿನಾಚರಣೆ. ಈ ದಿನದಂದೇ ಅವರು ಶ್ರೀನಗರ ಜೈಲಿನಲ್ಲೇ ಮೃತಪಟ್ಟಿದ್ದರು. 370ನೇ ವಿಧಿ ರದ್ದುಗೊಂಡಾಗಿನಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮರಸ್ಯವಿದೆ. ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿ ನಡೆದಿದೆ. ಇದು ಏಕೀಕೃತ ಭಾರತಕ್ಕಾಗಿ ಪ್ರಾಣತೆತ್ತ ಮುಖರ್ಜಿ ಅವರಿಗೆ ಸಲ್ಲುವ ದೊಡ್ಡಗೌರವ' ಎಂದರು.
'ಜಮ್ಮು ಮತ್ತು ಕಾಶ್ಮೀರದಲ್ಲಿ ಇದೀಗ ಪ್ರವಾಸೋದ್ಯಮವೂ ಸೇರಿದಂತೆ ವಿವಿಧ ವಲಯದಲ್ಲಿ ಹೂಡಿಕೆಗೆ ಅವಕಾಶ ತೆರೆದಿದೆ. ಇಲ್ಲಿ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿದ್ದು, ಶೈಕ್ಷಣಿಕ ಕೇಂದ್ರವೂ ಆಗಿದೆ' ಎಂದು ಅವರು ಹೇಳಿದರು.
'ಭಾರತದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಉತ್ತುಂಗದಲ್ಲಿದೆ. ಇದು ಎಲ್ಲರೂ ಹೆಮ್ಮೆಪಡುವ ವಿಷಯ' ಎಂದರು.