ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜುಲೈ 3ರಂದು ಮಂತ್ರಿ ಮಂಡಲ ಸಭೆ ನಡೆಯಲಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜುಲೈ 3ರಂದು ಮಂತ್ರಿ ಮಂಡಲ ಸಭೆ ನಡೆಯಲಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪ್ರಗತಿ ಮೈದಾನದಲ್ಲಿ ಹೊಸದಾಗಿ ನಿರ್ಮಿಸಿರುವ ಸಭಾಂಗಣದಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ. ಈ ಸಭಾಂಗಣವು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯ ಆತಿಥ್ಯ ವಹಿಸಲಿದೆ.
ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಸಭೆ ನಿಗದಿಯಾಗಿದೆ. ಜುಲೈ ಮೂರನೇ ವಾರದಲ್ಲಿ ಮುಂಗಾರು ಅಧಿವೇಶನ ಆರಂಭವಾಗುವ ಸಾಧ್ಯತೆ ಇದೆ.
ಮೋದಿ ಅವರು ಬುಧವಾರವಷ್ಟೇ ಬಿಜೆಪಿಯ ಉನ್ನತ ನಾಯಕರ ಜೊತೆ ಸುದೀರ್ಘ ಚರ್ಚೆಗಳನ್ನು ನಡೆಸಿದ್ದರು. ಅವರು ತಮ್ಮ ಸಂಪುಟ ಪುನರ್‌ರಚನೆ ಮಾಡುವ ಸಾಧ್ಯತೆಗಳಿವೆ ಎನ್ನುವ ಊಹಾಪೋಹಗಳಿಗೂ ಇದು ನಾಂದಿ ಹಾಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಸಂಘಟನಾ ಪ್ರಧಾನಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ಇತರರ ನಾಯಕರೊಂದಿಗೆ ಮೋದಿ ಸಭೆ ನಡೆಸಿದ್ದರು. ಸಭೆಯಲ್ಲಿ ನಡ್ಡಾ ಅವರು ಪಾಲ್ಗೊಂಡಿದ್ದರು. ಮುಂಬರುವ ಲೋಕಸಭಾ ಚುನಾವಣೆ ಮತ್ತು ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಪಕ್ಷವನ್ನು ಸಜ್ಜಗೊಳಿಸುವ ಸಲುವಾಗಿ, ಸರ್ಕಾರ ಮತ್ತು ಪಕ್ಷದ ಸಂಘಟನೆಯಲ್ಲಿ ಮಹತ್ವದ ಬದಲಾವಣೆಗಳು ಆಗಬಹುದೆಂಬ ಊಹಾಪೋಹಗಳಿಗೆ ಇದು ಕಾರಣವಾಯಿತು.