ನವದೆಹಲಿ (PTI): ಗ್ರಾಮೀಣ ಪ್ರದೇಶಗಳ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದ 'ಜಲ ಜೀವನ ಮಿಷನ್' ಯೋಜನೆಯನ್ನು ನಿಗದಿತ ಗುರಿಯಂತೆ ಅನುಷ್ಠಾನಗೊಳಿಸಿದಲ್ಲಿ ಭೇದಿ ಹಾಗೂ ಸಂಬಂಧಿತ ಕಾಯಿಲೆಗಳಿಂದಾಗಿ ಸಂಭವಿಸುವ 4 ಲಕ್ಷದಷ್ಟು ಸಾವುಗಳನ್ನು ತಡೆಯಲು ಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.
'ಜಲ ಜೀವನ ಮಿಷನ್' ಅನುಷ್ಠಾನದಿಂದಾಗಿ ಆರೋಗ್ಯದ ದೃಷ್ಟಿಯಿಂದ ಆಗುವ ಪ್ರಯೋಜನಗಳ ಕುರಿತು ಅಧ್ಯಯನ ನಡೆಸುವಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಡಬ್ಲ್ಯುಎಚ್‌ಒ ಅಧ್ಯಯನ ನಡೆಸಿ, ವರದಿ ಪ್ರಕಟಿಸಿದೆ.
ಡಾ.ರಾಜೀವ್ ಬಹಲ್ ಐಸಿಎಂಆರ್ ಪ್ರಧಾನ ನಿರ್ದೇಶಕವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದಲ್ಲಿ ಕಂಡು ಬಂದಿರುವ ಅಂಶಗಳು ಸಮಂಜಸ ಎನಿಸುತ್ತವೆ. ಅಪೌಷ್ಟಿಕತೆಗೂ ಕುಡಿಯುವ ನೀರಿಗೂ ಸಂಬಂಧ ಇದ್ದು ಈ ಸಮಸ್ಯೆ ಬಗ್ಗೆ ಗಮನ ಅಗತ್ಯ ಗ್ರಾಮೀಣ ಭಾಗದಲ್ಲಿ ಒಟ್ಟು ಮನೆಗಳ ಪೈಕಿ ಶೇ 62ರಷ್ಟು ಮನೆಗಳಿಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಒದಗಿಸಲಾಗಿದೆ ಎಂದು ಮೂಲಗಳು ಹೇಳಿವೆ.
'ಭೇದಿಯಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಬಾಧಿತ ವ್ಯಕ್ತಿಯ ಜೀವನ ಗುಣಮಟ್ಟ ಕುಸಿಯಲಿದೆ. ಆದರೆ, ಈ ಯೋಜನೆಯ ಅನುಷ್ಠಾನದಿಂದಾಗಿ ₹ 8 ಲಕ್ಷ ಕೋಟಿಯಷ್ಟು ಹಣ ಉಳಿತಾಯವಾಗಲಿದೆ' ಎಂದು ಅಧ್ಯಯನ ಹೇಳುತ್ತದೆ.
'ವಿಶ್ವವು ಕುಡಿಯುವ ನೀರು ಮತ್ತು ನೈರ್ಮಲ್ಯ ವಿಷಯದಲ್ಲಿ ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿ(ಎಸ್‌ಡಿಜಿ)ಗಳನ್ನು ಸಾಧಿಸಿದ್ದೇ ಆದಲ್ಲಿ, ಅದಕ್ಕೆ ಭಾರತವೇ ಕಾರಣವಾಗಲಿದೆ' ಎಂದು ಡಬ್ಲ್ಯುಎಚ್‌ಒ/ಯುನಿಸೆಫ್‌ನ ನೀರು ಪೂರೈಕೆ, ನೈರ್ಮಲ್ಯ ಮತ್ತು ಆರೋಗ್ಯ ಕಾರ್ಯಕ್ರಮದ ಸಹ ಮುಖ್ಯಸ್ಥ ರಿಚರ್ಡ್ ಜಾನ್‌ಸ್ಟನ್ ಹೇಳಿದ್ದಾರೆ.
'ದೊಡ್ಡ ಜನಸಂಖ್ಯೆಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯ ಎಂಬುದನ್ನು ತೋರಿಸಿಕೊಡುವ ಭಾರತದ ನಡೆ ವಿಶ್ವದ ಇತರ ರಾಷ್ಟ್ರಗಳಿಗೆ ಮಹತ್ವದ್ದಾಗುತ್ತದೆ. ಬದ್ಧತೆ ಹಾಗೂ ಹೂಡಿಕೆಯಿಂದ ಇಂಥ ಬೃಹತ್ ಯೋಜನೆ ಅನುಷ್ಠಾನ ಸಾಧ್ಯ ಎಂಬುದನ್ನು ಭಾರತ ತೋರಿಸಿಕೊಟ್ಟಂತಾಗುತ್ತದೆ' ಎಂದಿದ್ದಾರೆ.