ಫಿಟ್ನೆಸ್ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ನಾವು ಫಿಟ್ ಆಗಿದ್ರೆ ಆರೋಗ್ಯವಾಗಿ ಇರ್ತೀವಿ. ಹಾಗೂ ನಮಗೆ ಯಾವುದೇ ರೀತಿ ಆರೋಗ್ಯ ಸಮಸ್ಯೆಗಳು ಎದುರಾಗೋದಿಲ್ಲ. ಸುಮಾರು 40 ವರ್ಷದವರೆಗೂ ಆರೋಗ್ಯದ ಕಡೆಗೆ ಕಾಳಜಿ ಕೊಡದೇ ಇದ್ದರೂ ಕೂಡ ನಮಗೆ ಅಷ್ಟಾಗಿ ಸಮಸ್ಯೆಗಳು ಕಾಣಿಸಿಕೊಳ್ಳೋದಿಲ್ಲ. ಆದರೆ ಈಗಿನ ನಮ್ಮ ಬೇಜವಾಬ್ದಾರಿ ತನಕ್ಕೆ 40 ವರ್ಷದ ನಂತರ ಸರಿಯಾದ ಉತ್ತರ ಸಿಗುತ್ತೆ.
39 ವರ್ಷದವರೆಗೂ ನಾವು ತೋರಿಸಿದ ನಿರ್ಲಕ್ಷ್ಯಕ್ಕೆ 40 ವರ್ಷದ ನಂತರ ನಾವು ಬೆಲೆ ತೆರಬೇಕಾದ ಪರಿಸ್ಥಿತಿ ಎದುರಾಗಲಿದೆ. ಇನ್ನೂ 40 ವರ್ಷದ ನಂತರ ರಕ್ತದೊತ್ತಡ, ದೇಹದ ತೂಕ ಹೆಚ್ಚಾಗುವುದು, ಕ್ಯಾನ್ಸರ್, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಾಧಿಸುವ ಸಾಧ್ಯತೆ ಹೆಚ್ಛಾಗಿ ಇರೋದ್ರಿಂದ ಈ ಬಗ್ಗೆ ಗಮನ ಹರಿಸಿ. ಅದ್ರಲ್ಲೂ ಪುರುಷರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಲೇಬಾರದು. ಅಷ್ಟಕ್ಕು 40 ವರ್ಷದ ನಂತರ ಪುರುಷರ ಆಹಾರ ಕ್ರಮ ಹೇಗಿರಬೇಕು? ಯಾವ ರೀತಿಯ ಜೀವನ ಶೈಲಿಯನ್ನು ಪಾಲಿಸಬೇಕು ಅನ್ನೋದನ್ನು ತಿಳಿಯೋಣ.1. ಹೆಚ್ಚು ಉಪ್ಪು ಸೇವಿಸಬೇಡಿ
40 ವರ್ಷದ ನಂತರ ಪುರುಷರು ಹೆಚ್ಚು ಉಪ್ಪು ಸೇವಿಸಬಾರದು. ಯಾಕಂದ್ರೆ ಇದ್ರಿಂದ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆದಷ್ಟು ಹಸಿರು ತರಕಾರಿಗಳು, ಹಣ್ಣು-ಹಂಪಲನ್ನು ಸೇವನೆ ಮಾಡಿ. ಇದ್ರ ಜೊತೆಗೆ ಎಣ್ಣೆಯಲ್ಲಿ ಕರಿದ ಆಹಾರ, ಸಕ್ಕರೆ ಪದಾರ್ಥಗಳನ್ನು ಹೆಚ್ಚಾಗಿ ತಿನ್ನಬೇಡಿ.
2. ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಿ
40 ವರ್ಷದ ನಂತರ ಸಿಕ್ಕಾಪಟ್ಟೆ ಮಾಂಸಹಾರ ಸೇವನೆ ಮಾಡೋದಕ್ಕೆ ಹೋಗಬೇಡಿ. ಆದಷ್ಟು ಸಸ್ಯಹಾರಿ ಆಹಾರ ಪದಾರ್ಥಗಳನ್ನೇ ಸೇವಿಸಿ. ಜೊತೆಗೆ ಕಣ್ತುಂಬ ನಿದ್ದೆ ಮಾಡಿ. ಹಾಗೂ ಸರಳ ವ್ಯಾಯಾಮ, ಯೋಗವನ್ನು ನಿತ್ಯವು ಮಾಡಿ. ಪ್ರತಿದಿನ 2-3 ಲೀಟರ್ ನೀರು ಕುಡಿಯಿರಿ. ಇದರಿಂದ ಆರೋಗ್ಯಕ್ಕೂ ಒಳ್ಳೆಯದು. ಜೊತೆಗೆ ನಿಮ್ಮ ಒತ್ತಡವು ಕಡಿಮೆಯಾಗುತ್ತದೆ.
3. ಸಸ್ಯಹಾರಿ ಆಹಾರ ಸೇವಿಸಿ
40 ನೇ ವಯಸ್ಸಿನಲ್ಲಿ ಪುರುಷರು ಸಾಮಾನ್ಯವಾಗಿ ತಮ್ಮ ಸ್ನಾಯುವಿನ ದ್ರವ್ಯರಾಶಿಯ 1-5% ರಷ್ಟು ಭಾಗವನ್ನು ಕಳೆದು ಕೊಳ್ಳುತ್ತಾರೆ. ಇದು ಸ್ನಾಯುವಿನ ಜೀವಕೋಶದ ನಷ್ಟದಿಂದ ಉಂಟಾಗುತ್ತದೆ. ಹೀಗಾಗಿ ನಿಮಗೆ ಸಮಗ್ರ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಪ್ರತಿದಿನ ಪ್ರೋಟೀನ್ ಮತ್ತು ಮಲ್ಟಿವಿಟಾಮಿನ್‌ಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಉತ್ತಮ. ಇದರಿಂದ ಹೆಚ್ಚಿನ ಸ್ನಾಯುವಿನ ನಷ್ಟವನ್ನು ತಡೆಯಬಹುದು. ಇದರಿಂದ ನಿಮ್ಮ ಶಕ್ತಿ ಮತ್ತು ತ್ರಾಣ ಕೂಡ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೇ, ಇಂತಹ ಆಹಾರಗಳು ನೀವು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ.
4. ಆರೋಗ್ಯಕರ ಕೊಬ್ಬನ್ನು ಮಾತ್ರ ಸೇವಿಸಿ
ಕೊಬ್ಬಿನ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಅಪಾಯ. ಹಾಗಂತ ಕೊಬ್ಬು ಸೇವಿಸಲೇಬಾರದೆಂದೇನಿಲ್ಲ. ಉತ್ತಮ ಕೊಬ್ಬುಗಳು ಅಥವಾ ಅಪರ್ಯಾಪ್ತ ಕೊಬ್ಬುಗಳು ದೇಹಕ್ಕೆ ಅತ್ಯಗತ್ಯ. ಬೆಣ್ಣೆ ಹಣ್ಣು, ಬೀಜಗಳು, ಆಲಿವ್ ಎಣ್ಣೆ, ಅಗಸೆ ಬೀಜಗಳಲ್ಲಿ ಕಂಡುಬರುವ ಕೊಬ್ಬುಗಳು ಒಟ್ಟಾರೆ ಆರೋಗ್ಯ ದೃಷ್ಟಿಯಿಂದ ಉತ್ತಮ. ಅಷ್ಟೇ ಅಲ್ಲದೇ, ಬೊಜ್ಜು, ಮಧುಮೇಹ ಮತ್ತು ಇತರ ಕಾಯಿಲೆಗಳ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ.
5. ಪ್ರೋಟಿನ್ ಸೇವನೆಯನ್ನು ಹೆಚ್ಚಿಸಿ ಪ್ರೋಟಿನ್ ಗಳು ನಮ್ಮ ದೇಹದ ನಿರ್ಮಾಣಕಾರಿಗಳು ಅನ್ನೋದು ನಮಗೆಲ್ಲಾ ಗೊತ್ತಿದೆ. ವಯಸ್ಸಾದಂತೆ ಸ್ನಾಯು ದ್ರವ್ಯರಾಶಿಯನ್ನು ಕಳೆದುಕೊಳ್ಳುವುದರಿಂದ ನಾವು ಪ್ರೋಟೀನ್ ಅನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಹೀಗಾಗಿ ನೀವು ಕಪ್ಪು ಬೀನ್ಸ್, ಕಡಲೆ, ವಾಲ್ನಟ್, ಬಾದಾಮಿ, ಚಿಯಾ ಬೀಜಗಳು, ಅಗಸೆ ಬೀಜ, ಸೂರ್ಯಕಾಂತಿ ಬೀಜ ಮತ್ತು ಕುಂಬಳಕಾಯಿ ಬೀಜಗಳನ್ನು ಸೇವಿಸಿದರೆ ಉತ್ತಮ. ಆದಷ್ಟು ಅನಾರೋಗ್ಯಕರ ಕೊಬ್ಬುಗಳನ್ನು ಹೊಂದಿಲ್ಲದ ಆಹಾರಗಳನ್ನು ಸೇವಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
6. ಮದ್ಯಪಾನ ಮಾಡಬೇಡಿ ಪುರುಷರು ವಯಸ್ಸಾಗುತ್ತಿದ್ದಂತೆ ದುರಾಭ್ಯಾಸಗಳನ್ನು ಹೆಚ್ಚಾಗಿ ಮೈಗೂಡಿಸಿಕೊಳ್ಳುತ್ತಾರೆ. ಅದ್ರಲ್ಲೂ ಕುಡಿತ, ಸಿಗರೇಟ್ ಚಟ 40 ವರ್ಷದ ನಂತರ ಹೆಚ್ಚಾಗುತ್ತದೆ. ಕೌಟುಂಬಿಕ, ಸಮಸ್ಯೆ, ಕೆಲಸದ ಒತ್ತಡ ಎಂದು ನೆಪ ಹೇಳಿ ದುಸ್ಚಟಗಳಿಗೆ ದಾಸರಾಗಿ ಬಿಡುತ್ತಾರೆ. ಇದು ಅವರ ಕಿಡ್ನಿ, ಶ್ವಾಸಕೋಶಗಳಿಗೆ ಹಾನಿಯುಂಟು ಮಾಡುತ್ತದೆ. ಹೀಗಾಗಿ ಈ ದುಸ್ಚಟಗಳಿಂದ ದೂರ ಇದ್ದರೆ ಉತ್ತಮ.
7. ಸಕ್ಕರೆ ಹೆಚ್ಚು ಸೇವಿಸಬೇಡಿ 40 ವರ್ಷದ ನಂತರ ಅಧಿಕ ಸಕ್ಕರೆಯಾಂಶವಿರೋ ಪದಾರ್ಥಗಳನ್ನು ಸೇವಿಸಬೇಡಿ. ಕೇಕ್, ಸ್ವೀಟ್ಸ್, ಚಾಕಲೇಟ್, ಡೋನಟ್ ಕೂಲ್ ಡ್ರಿಂಕ್ ಗಳನ್ನು ಮುಟ್ಟದಿದ್ದರೆ ಒಳ್ಳೆಯದು. ಇದರಲ್ಲಿ ಕ್ಯಾಲೋರಿ ಅಂಶವು ಅಧಿಕವಾಗಿದ್ದು, ಏಕಾ ಏಕಿ ತೂಕ ಹೆಚ್ಚಾಗುತ್ತದೆ. ಇದರಿಂದ ಮಧುಮೇಹ ವಕ್ಕರಿಸುವ ಸಾಧ್ಯತೆಯೂ ಹೆಚ್ಚಿದೆ. ಆರೋಗ್ಯವೇ ಭಾಗ್ಯ. ಎಷ್ಟೇ ಅಷ್ಟೈಶ್ಚರ್ಯ ಇದ್ದರೂ ಕೂಡ ಆರೋಗ್ಯ ಇಲ್ಲದೇ ಹೋದರೆ ಏನು ಪ್ರಯೋಜನ? ಹೀಗಾಗಿ ಎಲ್ಲಾ ವಯಸ್ಸಿನಲ್ಲೂ ಆರೋಗ್ಯದ ಕಾಳಜಿ ಮಾಡೋದನ್ನು ಮರೀಬೇಡಿ.