ಇಂದು ಹೊಸ ತಲೆಮಾರಿಗೆ ಹೆಚ್ಚು ಗೊತ್ತಿರದು.ಅಂದು ಜೂನ್ 25, 1975 ರ ಮಧ್ಯರಾತ್ರಿ, ಇಂದಿರಾ ಗಾಂಧಿ ಎಂಬ ಸರ್ವಾಧಿಕಾರಿ ಪ್ರಧಾನಿಯಿಂದ ಭಾರತದ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲಾಯಿತು. ಇಂದಿಗದು 48 ವರ್ಷಗಳ ಹಿಂದದು.
ಆಕಾಶವಾಣಿ ಕೇಳುತ್ತಿದ್ದ ಭಾರತೀಯ ಜನತೆಗೆ ಇಂದಿರಾ ಗಾಂಧಿ ದೊಡ್ಡ ಶಾಕ್ ನೀಡಿದ್ದರು. ಇಂದಿರಾ ದನಿಯಲ್ಲಿ ಫ್ಯಾಸಿಸಂನ ಅಲೆಗಳು ಮೊಳಗಿದ ದಿನ. ಜೂನ್ 26ರ ಬೆಳಗ್ಗೆ ಇಂದಿರಾ ಸರ್ವಾಧಿಕಾರದ ಗೂಡು ಕಟ್ಟಿಕೊಂಡು ಎಚ್ಚೆತ್ತುಕೊಂಡಿದ್ದ ಜನಸಮೂಹಕ್ಕೆ ಬಡಿಯುತ್ತಿದ್ದರು. ಮಧ್ಯರಾತ್ರಿ ಇದ್ದಕ್ಕಿದ್ದಂತೆ ಘೋಷಸಲಾದ ತುರ್ತು ಪರಿಸ್ಥಿತಿಯ 48 ನೇ ವμರ್Áಚರಣೆಯಲ್ಲಿ ದೇಶವಿದೆ. ಭಾರತದ ಕರಾಳ ದಿನಗಳ ನೆನಪು.
25 ಜೂನ್ 1975 ರಂದು ಮಧ್ಯರಾತ್ರಿ ಘೋಷಿಸಲಾದ ತುರ್ತು ಪರಿಸ್ಥಿತಿಯು 21 ಮಾರ್ಚ್ 1977 ರವರೆಗೆ ಮುಂದುವರೆಯಿತು. ಅದು 21 ತಿಂಗಳ ಸುಧೀರ್ಘ ಅವಧಿಯ ಸರಪಳಿ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಕತ್ತಲೆಯಲ್ಲಿಟ್ಟ ದಿನಗಳು. ತುರ್ತು ಪರಿಸ್ಥಿತಿಯು ಇಂದಿರಾಗಾಂಧಿಯವರು ವಿರೋಧ ಪಕ್ಷಗಳನ್ನು ಮತ್ತು ಅವರ ವಿರುದ್ಧ ಎದ್ದ ದನಿಗಳನ್ನು ತೊಲಗಿಸಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸಲು ಮಾಡಿದ ತಂತ್ರವಾಗಿತ್ತು. ಕಿರಾತ ಕಾನೂನುಗಳ ವಿರುದ್ಧ ಬೀದಿಗಿಳಿದ ಆದರ್ಶವಾದಿಗಳು ತೀವ್ರ ಶೋಷಣೆಯನ್ನು ಎದುರಿಸಬೇಕಾಯಿತು. ಸಂಸದೀಯ ಸಮಿತಿಯ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್ ಕೆ ಅಡ್ವಾಣಿ ಅವರನ್ನು ಇಂದಿರಾ ಪೋಲೀಸರು ಬಂಧಿಸಿದ್ದರು.
ಜನಸಂಘವು ತುರ್ತುಪರಿಸ್ಥಿತಿಯನ್ನು ಬಹಿರಂಗವಾಗಿ ವಿರೋಧಿಸಿತು. ಇದರೊಂದಿಗೆ ಇಂದಿರಾಗಾಂಧಿ ಎಲ್ಲ ನಾಯಕರನ್ನು ಜೈಲಿಗೆ ಹಾಕಿದರು. 'ಜೂನ್ 26, 1975 ನಾವು ಅರ್ಥಮಾಡಿಕೊಂಡಂತೆ ಭಾರತದ ಪ್ರಜಾಪ್ರಭುತ್ವದ ಕೊನೆಯ ದಿನವೆಂದು ಸಾಬೀತುಪಡಿಸಬಹುದು. ಬಂಧನಕ್ಕೊಳಗಾದ ನಂತರ ಎಲ್.ಕೆ.ಅಡ್ವಾಣಿ ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದು ಹಾಗಲ್ಲ. ತುರ್ತು ಪರಿಸ್ಥಿತಿಯು ಭಾರತದ ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲಾಗಿತ್ತು.
ಪ್ರಜಾಪ್ರಭುತ್ವ ಮೌಲ್ಯಗಳು ಕುಸಿಯುತ್ತಿದೆ ಎಂಬ ಕೂಗಿನ ಈ ಸಂದರ್ಭದಲ್ಲಿ ಮಾಧ್ಯಮಗಳನ್ನು ಬೇಟೆಯಾಡಿ ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸಿದ ತುರ್ತುಪರಿಸ್ಥಿತಿಯ 48ನೇ ವμರ್Áಚರಣೆ ಕುರಿತು ಚರ್ಚೆ ಹೆಚ್ಚು ನಡೆಯಬೇಕಿದೆ.
ಜಗತ್ತಿನಾದ್ಯಂತ ಎಲ್ಲೆಲ್ಲಿ ಕಮ್ಯುನಿಸ್ಟರು ಅಧಿಕಾರಕ್ಕೆ ಬಂದಿದ್ದಾರೋ ಅಲ್ಲೆಲ್ಲ ದಮನಗಳು ನಡೆಯುತ್ತಿವೆ. ಕಾಂಗ್ರೆಸ್ಸ್ ಇಂದು ಬಹುತೇಕ ಕಮ್ಯುನಿಸ್ಟ್ ಮನೋಸ್ಥಿತಿಯ ನಾಕಯರ ಪಕ್ಷವಾಗಿ ಮಾರ್ಪಟ್ಟಿದೆ ಎಂಬುದು ನಿರ್ವಿವಾದ ಎಂಬಲ್ಲಿಗೆ ಜನಸಾಮಾನ್ಯರು ಹೆಚ್ಚು ಚರ್ಚಿಸಬೇಕಿದೆ.
ಅಂದಿನ ಕಥೆ ಏನು?: ಕಥೆಯಲ್ಲಿ ವ್ಯಥೆ!
ಉತ್ತರಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ 1971ರ ಚುನಾವಣೆಯಲ್ಲಿ ಸೋತಿದ್ದ ಸಮಾಜವಾದಿ ಪಕ್ಷದ ರಾಜ್ ನಾರಾಯಣ್ ಅವರು ವಿಜೇತ ಅಭ್ಯರ್ಥಿ ಇಂದಿರಾ ಗಾಂಧಿ ಆಯ್ಕೆ ಪ್ರಶ್ನಿಸಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ವಾದ-ವಿವಾದ ಆಲಿಸಿದ ನ್ಯಾಯಾಲಯ ಮುಖ್ಯವಾಗಿ ಎರಡು ಅಂಶಗಳ ಮೇಲೆ ಗಮನವನ್ನು ಕೇಂದ್ರೀಕರಿಸಿತು.
1-ಪ್ರಧಾನಿ ಕಾರ್ಯಾಲಯದ ಕರ್ತವ್ಯಾಧಿಕಾರಿಯಾಗಿದ್ದ ಯಶ್ ಪಾಲ್ ಕಪೂರ್ ಅವರನ್ನು ಇಂದಿರಾ ಅವರು ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ ಎಂಬುದು.
2-ಇಂದಿರಾ ಗಾಂಧಿ ಅವರು ಉತ್ತರಪ್ರದೇಶದಲ್ಲಿ ಚುನಾವಣಾ ಸಭೆಗಳನ್ನು ಏರ್ಪಡಿಸಲು ಅಗತ್ಯವಾದ ವೇದಿಕೆ, ಧ್ವನಿವರ್ಧಕ, ವಿದ್ಯುತ್ ಪೂರೈಕೆ ಮುಂತಾದವುಗಳನ್ನು ವ್ಯವಸ್ಥೆಗೊಳಿಸಲು ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡಿದ್ದರು ಎಂಬುದು. ಅಲಹಾಬಾದ್ ಉಚ್ಚ ನ್ಯಾಯಾಲಯವು 1975ರ ಜೂನ್ 12ರಂದು ತೀರ್ಪು ನೀಡಿ, ಇಂದಿರಾ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ರದ್ದು ಮಾಡಿ ಮುಂದಿನ 6 ವರ್ಷಗಳ ಕಾಲ ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲವೆಂದು ಸಾರಿತು.
ಪ್ರಧಾನಿ ವಿರುದ್ಧ ತೀರ್ಪು ನೀಡದಂತೆ ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ಮೇಲೆ ಪ್ರಭಾವ ಬೀರಲು ಮಹಾರಾಷ್ಟ್ರದ ಕಮ್ಯುನಿಸ್ಟ್ ನಾಯಕ ಎಸ್.ಎ.ಡಾಂಗೆ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ.ಎನ್.ಭಗವತಿ ಪ್ರಯತ್ನಿಸಿದರೆಂಬ ವರದಿಗಳಿದ್ದವು.ಈ ತೀರ್ಪಿನ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಇಂದಿರಾ ಪ್ರಧಾನಿ ಸ್ಥಾನ ತ್ಯಜಿಸುವಂತೆ ಭಾರತದಾದ್ಯಂತ ಆಂದೋಲನ ಆರಂಭಿಸಿದವು. ಈ ನಡುವೆ ಇಂದಿರಾ ಗಾಂಧಿ ಸವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದರು. ವಾದ-ವಿವಾದಗಳ ನಂತರ, ಸುಪ್ರೀಂ ಕೋರ್ಟ್ನ ರಜಾಕಾಲದ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ಅವರು ಕೆಲವು ಷರತ್ತುಗಳೊಂದಿಗೆ ಅಲಹಾಬಾದ್ ಹೈಕೋರ್ಟಿನ ತೀರ್ಪಿಗೆ ತಡೆಯಾಜ್ಞೆ ನೀಡಿದರು. ಅವರ ಆದೇಶದ ಪ್ರಕಾರ, ಸುಪ್ರೀಂ ಕೋರ್ಟ್ನ ಅಂತಿಮ ತೀರ್ಪು ಬರುವವರೆಗೆ ಇಂದಿರಾ ಗಾಂಧಿ ಪ್ರಧಾನಿಯಾಗಿ ಮುಂದುವರಿಯ ಬಹುದಾದರೂ ಲೋಕಸಭೆಯಲ್ಲಿ ಮತದಾನ ಮಾಡುವಂತಿರಲಿಲ್ಲ.
ಆ ವೇಳೆಗಾಗಲೇ ಬಿಹಾರ ಮತ್ತು ಗುಜರಾತ್ ಸರ್ಕಾರಗಳಲ್ಲಿನ ಭ್ರಷ್ಟಾಚಾರದ ವಿರುದ್ಧ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು 'ಸಂಪೂರ್ಣ ಕ್ರಾಂತಿ' ಎಂಬ ಹೆಸರಿನಲ್ಲಿ ಬೃಹತ್ ಆಂದೋಲನ ಆರಂಭಿಸಿದ್ದರು. ಇದರೊಂದಿಗೆ ದೇಶಾದ್ಯಂತ ರೈಲ್ವೆ ಮುಷ್ಕರವೂ ನಡೆಯುತ್ತಿತ್ತು. ಜೆಪಿ, ಮೊರಾರ್ಜಿ ದೇಸಾಯಿ, ಚರಣ್ ಸಿಂಗ್, ರಾಜ ನಾರಾಯಣ್, ಎಲ್.ಕೆ.ಅಡ್ವಾಣಿ, ವಾಜಪೇಯಿ ಮುಂತಾದ ಮುಖಂಡರನ್ನು ಒಳಗೊಂಡಂತೆ ವಿರೋಧ ಪಕ್ಷಗಳು ಒಂದಾಗಿ ಇಂದಿರಾ ಗಾಂಧಿ ಅಧಿಕಾರದಿಂದ ಕೆಳಗಿಳಿಯಲೇಬೇಕೆಂದು ಬೃಹತ್ ಆಂದೋಲನ ಪ್ರಾರಂಭಿಸಿದರು. 1975ರ ಜೂನ್ 24ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಸಭೆಯು ಭಾರತದ ಚರಿತ್ರೆಯಲ್ಲಿ ದಾಖಲಾರ್ಹವಾಯಿತು. ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಜೆ.ಪಿ. ಅವರು ಸೇನೆ ಮತ್ತು ಸಾರ್ವಜನಿಕ ಅಧಿಕಾರಿಗಳು ಯಾವುದೇ ಕಾನೂನುಬಾಹಿರ ಆದೇಶಗಳನ್ನು ಪಾಲಿಸಬೇಕಾಗಿಲ್ಲ ಎಂದು ಕರೆ ನೀಡಿದರು. ಅಲಹಾಬಾದ್ ನ್ಯಾಯಾಲಯದ ತೀರ್ಪಿನ ನಂತರ ಪ್ರಧಾನಿ ಸ್ಥಾನದಿಂದ ಕೆಳಗಿಳಿಯಲು ಇಂದಿರಾ ಇಚ್ಛಿಸಿದ್ದರಾದರೂ ಮಗ ಸಂಜಯ್ ಗಾಂಧಿ ಮತ್ತು ಪ.ಬಂಗಾಳದ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ್ ರೇ ಅವರು ಸಲಹೆ ನೀಡಿ ತುರ್ತು ಪರಿಸ್ಥಿತಿ ಘೊಷಿಸಲು ಕಾರಣರಾದರು. ಸಂವಿಧಾನದ 352ನೇ ವಿಧಿ ಇದಕ್ಕೆ ನೆರವಾಯಿತು. 1975ರ ಜೂನ್ 25ರ ರಾತ್ರಿ 12 ಗಂಟೆಗೆ ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರಿಂದ ಸಹಿ ಪಡೆಯುವುದರೊಂದಿಗೆ ಭಾರತದಲ್ಲಿ ಆಂತರಿಕ ತುರ್ತಪರಿಸ್ಥಿತಿ ಜಾರಿಗೊಳಿಸಲಾಯಿತು.
ಜೀವವಿರೋಧಿ ನೀತಿ ಸಮರ್ಥನೆ: ಕುಖ್ಯಾತ ಮೀಸಾ ಕಾಯಿದೆಯನ್ವಯ ಬಂಧಿತರಾಗಿದ್ದ ಕೆಲವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದರಾದರೂ ಕೋರ್ಟ್ನಿಂದ ಯಾವುದೇ ಪರಿಹಾರ ದೊರೆಯಲಿಲ್ಲ. ಸದರಿ ಮೊಕದ್ದಮೆಯಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ನಿರನ್ ಡೇ, ಜೀವ ರಕ್ಷಣೆಯ ಹೊಣೆ ಸರ್ಕಾರದ್ದಾಗಿರುವಂತೆ ದೇಶಕ್ಕೆ ಅನಿವಾರ್ಯವಾದ ಪಕ್ಷದಲ್ಲಿ ಜೀವ ತೆಗೆಯುವ ಅಧಿಕಾರವೂ ಸರ್ಕಾರದ ಕೈಯಲ್ಲಿರುವುದು ಸಂವಿಧಾನಾತ್ಮಕವಾಗಿದೆ ಎಂದು ಹೇಳುವ ಮೂಲಕ ಸರ್ಕಾರದ ಜೀವವಿರೋಧಿ ಮತ್ತು ಪ್ರಜಾತಂತ್ರ ವಿರೋಧಿ ದಿಕ್ಕನ್ನು ಸಮರ್ಥಿಸಿಕೊಂಡರು. ಈ ನಡುವೆ ಸುಪ್ರೀಂ ಕೋರ್ಟ್ ಮುಂದೆ ಎರಡು ಮೊಕದ್ದಮೆಗಳು ವಿಚಾರಣೆಗೆ ಬಂದವು. ಅವುಗಳೆಂದರೆ, ಇಂದಿರಾ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ರದ್ದುಪಡಿಸಿ ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಸ್ನಿಸಿ ಸಲ್ಲಿಸಿದ್ದ ಅಪೀಲು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು 1975ರ ನವೆಂಬರ್ 7ರಂದು ತೀರ್ಪು ನೀಡಿ ಅಲಹಾಬಾದ್ ಹೈಕೋರ್ಟ್ನ ಆದೇಶವನ್ನು ರದ್ದುಗೊಳಿಸಿ ಇಂದಿರಾ ಗಾಂಧಿ ಆಯ್ಕೆಯನ್ನು ಕ್ರಮಬದ್ಧಗೊಳಿಸಿತು.
ಹಾಗೆಯೇ ತುರ್ತಪರಿಸ್ಥಿತಿಯ ಸಂವಿಧಾನ ಬದ್ಧತೆಯನ್ನು ಪ್ರಶ್ನಿಸಿ ಹೂಡಲಾಗಿದ್ದ ಮೊಕದ್ದಮೆಯ ವಿಚಾರಣೆ 1975ರ ಡಿಸೆಂಬರ್ನಲ್ಲಿ ನ್ಯಾಯಾಲಯದ ಮುಂದೆ ಬಂದಿತು. ನ್ಯಾಯಮೂರ್ತಿಗಳಾದ ಎಚ್.ಆರ್.ಖನ್ನ, ಎಂ.ಎಚ್.ಬೇಗ್, ವೈ.ವಿ.ಚಂದ್ರಚೂಡ್, ಪಿ.ಎನ್.ಭಗವತಿ ಅವರ ಪೀಠವು ವಿಚಾರಣೆ ನಡೆಸಿತು. ಅಂತಿಮವಾಗಿ ತೀರ್ಪು ಬಂದಾಗ ನಾಲ್ವರು ನ್ಯಾಯಮೂರ್ತಿಗಳು ಬಹುಮತದ ತೀರ್ಪು ನೀಡಿದ್ದರು. ಅದರ ಪ್ರಕಾರ, ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಮೂಲಭೂತ ಹಕ್ಕುಗಳನ್ನು ಅಮಾನತ್ತಿನಲ್ಲಿಡುವುದು ನ್ಯಾಯಸಮ್ಮತವಾಗಿರುತ್ತದೆ. ದೇಶಕ್ಕೆ ಸಾರ್ವತ್ರಿಕ ಅಪಾಯಗಳಿದ್ದಾಗ ನಾಗರಿಕರಿಗೆ ಭದ್ರತೆ ನೀಡುವ ರಕ್ಷಣಾ ಕಾನೂನು ಅಮೂಲ್ಯವಾಗಿದ್ದು, ದೇಶದ ಹಿತರಕ್ಷಣೆಯೇ ಪ್ರಧಾನವಾಗಿರುತ್ತದೆ. ಬಂಧಿತರ ಹಕ್ಕೇ ಅಮಾನತಾಗಿರುವಾಗ ಅವರ ಪರವಾಗಿ ಯಾರೂ ಹಕ್ಕು ಚಲಾಯಿಸಲು ಸಾಧ್ಯವಿಲ್ಲ. ಈ ತೀರ್ಪಿನ ನಂತರ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ತಿರಸ್ಕರಿಸಲಾಯಿತು. ನ್ಯಾಯಮೂರ್ತಿ ಎಚ್.ಆರ್.ಖನ್ನ ಅವರು ಮಾತ್ರ ವಿಭಿನ್ನವಾದ ತೀರ್ಪು ನೀಡಿದರು. ತುರ್ತು ಪರಿಸ್ಥಿತಿಯ ಅವಧಿಯಲ್ಲೂ ನಾಗರಿಕರ ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಅಧಿಕಾರವು ಪ್ರಭುತ್ವಕ್ಕಾಗಲೀ, ಸರ್ಕಾರಕ್ಕಾಗಲೀ ಇರುವುದಿಲ್ಲ. ಜಗತ್ತಿನ ಪ್ರತಿಯೊಂದು ನಾಗರಿಕ ಸಮಾಜದಲ್ಲಿಯೂ ಕಾಯ್ದೆಯ ಉದ್ದೇಶ ಮತ್ತು ಮೂಲಭೂತ ಗ್ರಹಿಕೆಗಳು ಇದೇ ಉದ್ದೇಶ ಹೊಂದಿರುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಸರ್ಕಾರದ ವಿರುದ್ಧದ ಈ ಆತಸಾಕ್ಷಿಯ ತೀರ್ಪಿನಿಂದಾಗಿ ಮುಂದೆ ಅವರು ಭಾರತದ ಸವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗುವ ಅವಕಾಶದಿಂದ ವಂಚಿತರಾಗಬೇಕಾಯಿತು.
ಜನತಾ ಪಕ್ಷಕ್ಕೆ ಗೆಲುವು: ತಾವು ಜನಪ್ರಿಯತೆ ಗಳಿಸಿದ್ದೇವೆಂಬ ಭ್ರಮೆಯಲ್ಲಿದ್ದ ಇಂದಿರಾ ಗಾಂಧಿಯವರು ವಂದಿಮಾಗಧರ ಸಲಹೆಯಂತೆ ಲೋಕಸಭೆಗೆ ಚುನಾವಣೆ ಘೊಷಿಸಿದರು. ತುರ್ತು ಪರಿಸ್ಥಿತಿಯನ್ನು ಸ್ವಲ್ಪಮಟ್ಟಿಗೆ ಸಡಿಲಿಸಿ 1977ರ ಮಾರ್ಚ್ 16 ಮತ್ತು 19ರಂದು ಚುನಾವಣೆ ನಡೆಸಲು ದಿನಾಂಕವನ್ನು ಘೊಷಿಸಲಾಯಿತು. ವಿರೋಧ ಪಕ್ಷದ ನಾಯಕರನ್ನು ಸೆರೆಮನೆಯಿಂದ ಬಿಡುಗಡೆಗೊಳಿಸಲಾಯಿತು.
ಜೆ.ಪಿ.ಯವರ ನೇತೃತ್ವದಲ್ಲಿ ಸಂಸ್ಥಾ ಕಾಂಗ್ರೆಸ್, ಭಾರತೀಯ ಜನಸಂಘ, ಸಮಾಜವಾದಿ ಪಕ್ಷ ಮತ್ತು ಆಗ ತಾನೆ ಕಾಂಗ್ರೆಸ್ನಿಂದ ಸಿಡಿದು ಬಂದು ಕಾಂಗ್ರೆಸ್ ಫಾರ್ ಡೆಮಾಕ್ರಸಿ ಎಂಬ ಪಕ್ಷವನ್ನು ಸ್ಥಾಪಿಸಿದ್ದ ಬಾಬು ಜಗಜೀವನ ರಾಂ ಸೇರಿ 1977ರ ಜನವರಿ 23ರಂದು, ಜನತಾ ಪಕ್ಷವನ್ನು ಸ್ಥಾಪಿಸಲಾಯಿತು. ಕಾರ್ವಿುಕ ನಾಯಕ ಜಾರ್ಜ್ ಫರ್ನಾಂಡೀಸ್ ಅವರನ್ನು ಸಿಡಿಮದ್ದು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಿ ತಿಹಾರ್ ಜೈಲಿನಲ್ಲಿಡಲಾಗಿತ್ತು. ಅವರು ಜೈಲಿನಿಂದಲೇ ಸ್ಪರ್ಧಿಸಿ ಮೂರು ಲಕ್ಷಗಳಿಗೂ ಹೆಚ್ಚಿನ ಮತಗಳ ಅಂತರದಲ್ಲಿ ಗೆದ್ದು ದಾಖಲೆ ನಿರ್ವಿುಸಿದರು. ಉತ್ತರ ಪ್ರದೇಶದ 84 ಲೋಕಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಹೀನಾಯವಾಗಿ ಸೋತು ಜನತಾಪಕ್ಷ ವಿಜಯ ಸಾಧಿಸಿತ್ತು. ಸ್ವತಃ ಇಂದಿರಾ ಗಾಂಧಿ ಮತ್ತು ಅವರ ಮಗ ಸಂಜಯ್ ಗಾಂಧಿ ಕ್ರಮವಾಗಿ ರಾಯ್ ಬರೇಲಿ ಮತ್ತು ಫಿಲಿಬಿತ್ ಕ್ಷೇತ್ರಗಳಲ್ಲಿ ಪರಾಭವಗೊಂಡರು. ತುರ್ತಪರಿಸ್ಥಿತಿಯ 19 ತಿಂಗಳು ಅವಧಿಯಲ್ಲಿ ಅಪಾರ ನೋವು ಅನುಭವಿಸಿದ್ದ ಭಾರತದ ಪ್ರಜ್ಞಾವಂತ ಮತದಾರ ಮೌನಕ್ರಾಂತಿಯ ಮೂಲಕ ಸರ್ವಾಧಿಕಾರಿ ಆಡಳಿತವನ್ನು ಕಿತ್ತೊಗೆದು ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಮುನ್ನುಡಿ ಬರೆದಿದ್ದ. ಅಂದು ತುರ್ತು ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದ ನಮ್ಮಂತಹವರಿಗೆ ಈಗಲೂ ಅದು ದುಃಸ್ವಪ್ನವಾಗಿ ಕಾಡುತ್ತಿದೆ.
ಪತ್ರಿಕಾ ಸ್ವಾತಂತ್ರ್ಯಹರಣ: 1975ರ ಜೂನ್ 25ರ ರಾತ್ರಿಯೇ ಭಾರತದ ಬಹುತೇಕ ವಿರೋಧ ಪಕ್ಷಗಳ ನಾಯಕರನ್ನು ಬಂಧಿಸಿ ಸೆರೆಮನೆಗೆ ನೂಕಲಾಯಿತು. ಬಂಧಿತರಾದವರನ್ನು ಯಾವುದೇ ವಿಚಾರಣೆಯಿಲ್ಲದೆ ಅನಿರ್ದಿಷ್ಟ ಕಾಲ ಸೆರೆಮನೆಯಲ್ಲಿ ಇಡಲು ಮೀಸಾ ಮತ್ತು ಭಾರತದ ರಕ್ಷಣಾ ಕಾಯ್ದೆಗಳು ನೆರವು ನೀಡಿದವು. ಬಹುತೇಕ ಸಂವಿಧಾನಾತ್ಮಕ ಹಕ್ಕುಗಳ ಮೇಲೆ ನಿರ್ಬಂಧಗಳನ್ನು ಹೇರಲಾಯಿತು. ಪತ್ರಿಕಾ ಸ್ವಾತಂತ್ರ್ಯವನ್ನು ನಿರ್ಬಂಧಿಸಿ ಎಲ್ಲಾ ಪತ್ರಿಕೆಗಳ ಮೇಲೂ ಸೆನ್ಸಾರ್ಶಿಪ್ ವಿಧಿಸಿ ಅಧಿಕಾರಿಗಳನ್ನು ನೇಮಿಸಲಾಯಿತು. ಖ್ಯಾತ ಪತ್ರಿಕೋದ್ಯಮಿಗಳಾದ ಕುಲದೀಪ್ ನಯ್ಯರ್ ಮತ್ತು ರಾಮನಾಥ್ ಗೋಯೆಂಕಾ ಅವರನ್ನು ಬಂಧಿಸಿ ಸೆರೆಮನೆಗೆ ತಳ್ಳಲಾಯಿತು. ಇಂದಿರಾ ಆಡಳಿತದ ವಿರುದ್ಧ ಬರೆಯುವ, ಮಾತನಾಡುವವರನ್ನು ದಸ್ತಗಿರಿ ಮಾಡಿ ಸೆರೆಮನೆಯಲ್ಲಿ ಚಿತ್ರಹಿಂಸೆ ನೀಡಲಾಯಿತು.