ನವದೆಹಲಿ (PTI): 'ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ವಿಮಾನ ನಿಲ್ದಾಣಗಳ (ಹೆಲಿಪ್ಯಾಡ್, ವಾಟರ್ ಏರೊಡ್ರಮ್ ಒಳಗೊಂಡು) ಸಂಖ್ಯೆ 200 ದಾಟಲಿದ್ದು, ಭಾರತೀಯರ ಸುಖಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ವಿಮಾನಯಾನ ಸಂಸ್ಥೆಗಳು ಹೆಚ್ಚುವರಿಯಾಗಿ 1,400ಕ್ಕೂ ಹೆಚ್ಚು ಹೊಸ ವಿಮಾನಗಳನ್ನು ಖರೀದಿಸಲಿವೆ' ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಒಂಬತ್ತು ವರ್ಷಗಳ ಅವಧಿಯಲ್ಲಿ ದೇಶದ ವಿಮಾನಯಾನ ಕ್ಷೇತ್ರದಲ್ಲಿ ಆಗಿರುವ ಸಾಧನೆಗಳ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
'2014ರ ವರೆಗೆ ದೇಶದಲ್ಲಿ 74 ವಿಮಾನ ನಿಲ್ದಾಣಗಳಿದ್ದವು. ಈಗ ಅವುಗಳ ಸಂಖ್ಯೆ 148ಕ್ಕೇರಿದೆ. 2013-14ನೇ ಸಾಲಿನಡಿ 6 ಕೋಟಿ ಇದ್ದ ದೇಶೀಯ ಪ್ರಯಾಣಿಕರ ಸಂಖ್ಯೆಯು ಈಗ 14.5 ಕೋಟಿಗೆ ಮುಟ್ಟಿದೆ. ಇದೇ ಅವಧಿಯಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ 4.7 ಕೋಟಿಯಿಂದ 7 ಕೋಟಿಗೆ ಹೆಚ್ಚಳವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ₹ 1 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗುವ ಅಂದಾಜಿಸಿದೆ ಎಂದು ವಿವರಿಸಿದರು.
ವಾಯು ಸರಕು ಸಾಗಣೆಯಲ್ಲೂ(ಏರ್ ಕಾರ್ಗೋ) ಗಮನಾರ್ಹ ಸಾಧನೆಯಾಗಿದೆ. ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ 2.2 ದಶಲಕ್ಷ ಟನ್‌ನಿಂದ 3.6 ದಶಲಕ್ಷ ಟನ್‌ನಷ್ಟು ಸರಕು ಸಾಗಣೆ ಹೆಚ್ಚಳವಾಗಿದೆ. ಮೋದಿ ಕೈಗೊಂಡ ಸುಧಾರಣಾ ಕ್ರಮಗಳಿಂದ ಭಾರತವು, ವಿಮಾನಯಾನ ಕ್ಷೇತ್ರದಲ್ಲಿ ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು.
2014ರಲ್ಲಿ ದೇಶದಲ್ಲಿದ್ದ ನೌಕಾಪಡೆ ವಿಮಾನಗಳ ಸಂಖ್ಯೆ ಕೇವಲ 400. ಈಗ ಅವುಗಳ ಸಂಖ್ಯೆ 700ಕ್ಕೇರಿದೆ. ಏರ್ ಇಂಡಿಯಾವು 470 ಹೊಸ ವಿಮಾನಗಳ ಖರೀದಿಗೆ ಮುಂದಾಗಿದೆ. ಇದು ಕೇವಲ ಆರಂಭಿಕ ಹಂತವಷ್ಟೇ. ಮುಂದಿನ ದಿನಗಳಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳು 1,200ರಿಂದ 1,400 ವಿಮಾನಗಳನ್ನು ಖರೀದಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
'2030ರ ವೇಳೆಗೆ ವಾರ್ಷಿಕವಾಗಿ 30 ಕೋಟಿ ಜನರು ದೇಶೀಯವಾಗಿ ಪ್ರಯಾಣಿಸುವ ಅಂದಾಜಿಸಿದೆ. ಉಡಾನ್ ಯೋಜನೆಯಡಿ 1.2 ಕೋಟಿ ಪ್ರಯಾಣಿಕರು ಪ್ರಯೋಜನ ಪಡೆದಿದ್ದಾರೆ. ಶೀಘ್ರವೇ, ಈ ಯೋಜನೆಯಡಿ ಅಂತರರಾಷ್ಟ್ರೀಯ ವಿಮಾನಗಳ ಸೇವೆಯನ್ನೂ ಆರಂಭಿಸಲಾಗುವುದು' ಎಂದು ತಿಳಿಸಿದರು.