ಶ್ರೀನಗರ (PTI): ಜಮ್ಮು- ಕಾಶ್ಮೀರವು ಚುನಾಯಿತ ಸರ್ಕಾರವಿಲ್ಲದೇ, ಕೇಂದ್ರದ ಆಡಳಿತದಲ್ಲಿ ಸೋಮವಾರ ಐದು ವರ್ಷಗಳನ್ನು ಪೂರೈಸಿದೆ.
ಕಣಿವೆ ಪ್ರದೇಶದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವಲ್ಲಿ ಆಗುತ್ತಿರುವ ವಿಳಂಬದ ಕುರಿತು ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಪಿ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷಗಳು (ಪಿಡಿಪಿ) ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿವೆ.
'ಪ್ರಜಾಪ್ರಭುತ್ವವು ನಮ್ಮ ನರನಾಡಿಗಳಲ್ಲಿ, ನಮ್ಮ ಸಂಸ್ಕೃತಿಯಲ್ಲಿದೆ. 'ಭಾರತವು ಪ್ರಜಾಪ್ರಭುತ್ವದ ತಾಯಿ', 'ಭಾರತ ಪ್ರಜಾಪ್ರಭುತ್ವದ ದೇವಾಲಯ' ಈ ಪದಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮುದಾಯದ ಕುರಿತು ಉತ್ತಮ ಧ್ವನಿಯನ್ನು ಹೊರಡಿಸುತ್ತವೆ. ಆದರೆ, ಜಮ್ಮ-ಕಾಶ್ಮೀರ ಎಲ್ಲಿ ಆರಂಭವಾಗುತ್ತದೆಯೋ ಅಲ್ಲಿ ಪ್ರಜಾಪ್ರಭುತ್ವ ಕೊನೆಗೊಳ್ಳುತ್ತದೆ' ಎಂದು ನ್ಯಾಷನಲ್ ಕಾನ್ಫರೆನ್ಸ್‌ನ (ಎನ್‌ಪಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಸೋಮವಾರ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
'ಚುನಾಯಿತ ಸರ್ಕಾರವಿಲ್ಲದೇ ಐದು ವರ್ಷ ಪೂರ್ಣಗೊಂಡಿರುವುದಕ್ಕೆ ಇಡೀ ರಾಷ್ಟ್ರವೇ ನಾಚಿಕೆಯಿಂದ ತಲೆತಗ್ಗಿಸಿಕೊಳ್ಳಬೇಕಿದೆ' ಎಂದು ಪಿಡಿಪಿಯ ವಕ್ತಾರ ಮೋಹಿತ್ ಭಾನ್ ಹೇಳಿದ್ದಾರೆ.
'ಪ್ರಜಾಪ್ರಭುತ್ವದ ತಾಯಿ' ಎಂದು ಕರೆದುಕೊಳ್ಳುವುದಕ್ಕಾಗಿ ಇಡೀ ರಾಷ್ಟ್ರ ಮತ್ತು ಅದರ ನಾಯಕತ್ವವು ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿದೆ. ಜಮ್ಮು ಮತ್ತು ಕಾಶ್ಮೀರವು 5 ವರ್ಷಗಳ ಕಾಲ ಕೇಂದ್ರದ ಆಡಳಿತದಲ್ಲಿ ಸೊರಗಿದೆ. ಜನರ ಹಕ್ಕುಗಳು ಮತ್ತು ಪ್ರಾತಿನಿಧ್ಯವನ್ನು ನಿರ್ಲಕ್ಷಿಸಲಾಗಿದೆ' ಎಂದೂ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಈ ನಡುವೆ, ಬಿಜೆಪಿ ಸೇರಿದಂತೆ ಇತರ ರಾಜಕೀಯ ಪಕ್ಷಗಳು
ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸಬೇಕೆಂದು ಒತ್ತಾಯಿಸುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ 2014ರಲ್ಲಿ ಕೊನೆಯ ಬಾರಿಗೆ ವಿಧಾನಸಭಾ ಚುನಾವಣೆ ನಡೆದಿತ್ತು. 2019ರ ಆಗಸ್ಟ್ 5ರಂದು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಆರ್ಟಿಕಲ್ 370 ಅನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು. ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ 2018ರ ಜೂನ್ 19ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.