ಕಾಸರಗೋಡು: ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ತ್ಯಾಜ್ಯ ಮುಕ್ತ ನವ ಕೇರಳ ಅಭಿಯಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳು ಕೈಗೊಂಡಿರುವ ಶುಚಿತ್ವ ತ್ಯಾಜ್ಯ ಯೋಜನೆಗಳ ಕುರಿತು ಅವಲೋಕನ ನಡೆಸಲಾಯಿತು.
ಜೂನ್ 5 ರೊಳಗೆ ವಾರ್ಷಿಕ ಯೋಜನೆ ಮತ್ತು ನೈರ್ಮಲ್ಯ ತ್ಯಾಜ್ಯ ನಿರ್ವಹಣೆ ಯೋಜನೆಗೆ ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಯಿತು. ಎಂಸಿಎಫ್ ಉನ್ನತೀಕರಣ, ಹಸಿರು ಕ್ರಿಯಾ ಸೇನೆಗೆ ಸಲಕರಣೆ ಮತ್ತು ಸಮವಸ್ತ್ರ, ಬಯೋಗ್ಯಾಸ್ ಕಾಂಪೆÇೀಸ್ಟ್, ಸೋಕ್ ಪಿಟ್ ಮತ್ತು ಹಸಿರು ಕ್ರಿಯಾ ಸೇನೆಗೆ ವಾಹನ ಕೊಡುಗೆ ಯೋಜನೆಗಳನ್ನು ಪ್ರಾರಂಭಿಸಲು ನಿರ್ದೇಶಿಸಲಾಯಿತು. ರಾಜ್ಯದಲ್ಲೇ ಮೊದಲ ತ್ಯಾಜ್ಯ ಮುಕ್ತ ಪುರಸಭೆ ಎಂದು ಘೋಷಿಸಲ್ಪಟ್ಟರುವ ನೀಲೇಶ್ವರ ನಗರಸಭೆ ಚಟುವಟಿಕೆಯನ್ನು ಶ್ಲಾಘಿಸಲಾಯಿತು. ಜಿಲ್ಲಾ ಯೋಜನಾ ಸಮಿತಿಯ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ. ಇಭಾಶೇಖರ್, ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ, ಜಿಲ್ಲಾ ಯೋಜನಾಧಿಕಾರಿ ಎ.ಎಸ್. ಮಾಯಾ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರ್, ಜಿಲ್ಲಾ ಯೋಜನಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.
ಜಿಲ್ಲಾಸ್ಪತ್ರೆಗೆ ಜಾಗ:
ಜಿಲ್ಲಾ ಆಸ್ಪತ್ರೆಗೆ ಚೆಮ್ಮಟ್ಟಂವಯಲ್ ಪ್ರದೇಶದಲ್ಲಿ ಜಮೀನು ಖರೀದಿಗೆ ಜಂಟಿ ಯೋಜನೆ ತಯಾರಿಸಲಾಗಿದೆ ಎಂದು ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದ್ದಾರೆ. ಕಾಞಂಗಾಡ್‍ನಲ್ಲಿ ಚಟುವಟಿಕೆ ನಡೆಸುತ್ತಿರುವ ಜಿಲ್ಲಾ ಆಸ್ಪತ್ರೆಯ ಅಭಿವೃದ್ಧಿಗೆ ಪಂಚಾಯಿತಿಗಳು ತಲಾ 3 ಲಕ್ಷ ರೂ. ಹಾಗೂ ನಗರಸಭೆಯು ರೂ. 5ಲಕ್ಷ ಮೀಸಲಿರಿಸಬೇಕು. ಮಳೆಗಾಲ ಪೂರ್ವ ಸ್ವಚ್ಛತಾ ಕಾರ್ಯ ಹಾಗೂ ಕಸ ಹಾಕದಂತೆ ಪ್ರಚಾರ ಕಾರ್ಯಗಳನ್ನು ಬಲಪಡಿಸಬೇಕು. ಜಿಲ್ಲೆಯ ಎಲ್ಲಾ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳು ತಮ್ಮ ಅಧೀನದಲ್ಲಿರುವ ಸರ್ಕಾರಿ ಕಚೇರಿಗಳು ಹಸಿರು ಸಂಹಿತೆ ಅನುಸರಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಎಚ್ಚರಿಕೆ:
ಜಿಲ್ಲಾ ಯೋಜನಾ ಸಮಿತಿ ಸಭೆಗೆ ಹಾಜರಾಗದ ಪಂಚಾಯಿತಿ ಕಾರ್ಯದರ್ಶಿಗಳಿಂದ ವಿವರಣೆ ನೀಡುವಂತೆ ಜಿಲ್ಲಾಧಿಕಾರಿ ಕೆ.ಇಭಾಶೇಖರ್ ನಿರ್ದೇಶಿಸಿದ್ದಾರೆ. ಹಾಜರಾಗದ ಅಧಿಕಾರಿಗಳಿಂದ ವಿವರಣೆ ಕೇಳಲಾಗುವುದು, ನಿರಂತರ ಗೈರುಹಾಜರಾಗುತ್ತಿರುವವನ್ನು ಅಮಾಣತುಗೊಳಿಸಲಾಘುವುದು ಎಂದೂ ಎಚ್ಚರಿಸಿದ್ದಾರೆ. ಹಸಿರು ಕ್ರಿಯಾಸೇನೆಗೆ ಬಳಕೆದಾರರ ಶುಲ್ಕವನ್ನು ಸರಿಯಾಗಿ ಪಾವತಿಸುವ ಸಂಸ್ಥೆಗಳನ್ನು ಶ್ಲಾಘಿಸುವುದಾಗಿ ತಿಳಿಸಿದ ಜಿಲ್ಲಾಧಿಕಾರಿ, ಸಿವಿಲ್ ಸ್ಟೇಶನ್‍ನ ಎಲ್ಲಾ ಕಚೇರಿಗಳು ಹಸಿರು ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು. ಎಲ್ಲಾ ಕಚೇರಿಗಳಲ್ಲಿ ಸ್ಟೀಲ್ ಪಾತ್ರೆಗಳು ಮತ್ತು ಲೋಟಗಳನ್ನು ಬಳಸಬೇಕು ಮತ್ತು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ತಿಳಿಸಿದ್ದಾರೆ.