ಬಹನಾಗಾ ಬಜಾರ್ (PTI): ಒಡಿಶಾದ ತ್ರಿವಳಿ ರೈಲು ದುರಂತ ಸಂಭವಿಸಿ ಐದು ದಿನಗಳ ಬಳಿಕವೂ ಘಟನಾ ಸ್ಥಳಕ್ಕೆ ಭೇಟಿ ಕೊಡುತ್ತಿರುವ ಜನರ ಸಂಖ್ಯೆ ಕಡಿಮೆಯಾಗಿಲ್ಲ.
ಮೂರು ರೈಲುಗಳ ನಡುವೆ ಸಿಲುಕಿ ಅಪಘಾತದಲ್ಲಿ ಮೃತರಾದವರ ಅವಶೇಷಗಳನ್ನು ನೋಡಲು ಜನರು ತಮ್ಮ ಮೊಬೈಲ್ ಕ್ಯಾಮೆರಾಗಳೊಂದಿಗೆ ಬರುತ್ತಿದ್ದಾರೆ.
'ಘಟನಾ ಸ್ಥಳ ನೋಡಲು ನಾನು ಭುವನೇಶ್ವರದಿಂದ ಬಂದಿರುವೆ. ಅಪಘಾತದ ಚಿತ್ರಣ ನೋಡಿ ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ನನ್ನಿಂದ ಪದಗಳೇ ಹೊರಡುತ್ತಿಲ್ಲ' ಎಂದು ಪತ್ನಿ ರೂಪಾ ಜತೆಗೆ ಬಂದಿದ್ದ ಆಶೋಕ್ ಬೆಹೆರಾ ಹೇಳಿದರು. ಪತಿಯ ಮಾತಿಗೆ ದನಿಗೂಡಿಸಿದ ರೂಪಾ, 'ದೇವರ ಕೃಪೆಯಿಂದ ಗಾಯಾಳುಗಳು ಬೇಗ ಗುಣಮುಖರಾಗಲಿ'ಎಂದರು.
'ಅಪಘಾತದ ಸಮಯದಲ್ಲಿ ಸಂತ್ರಸ್ತರು ಏನು ಅನುಭವಿಸಿದರು ಎಂಬ ಆಲೋಚನೆಯೇ ನನ್ನನ್ನು ನಲುಗುವಂತೆ ಮಾಡಿದೆ' ಎಂದು ಸ್ನೇಹಿತರೊಂದಿಗೆ ಬಾಲೇಶ್ವರ ಪಟ್ಟಣದಿಂದ ಬಂದಿದ್ದ 12ನೇ ತರಗತಿ ವಿದ್ಯಾರ್ಥಿ ಅರ್ಜುನ್ ಜೆನಾ ಅಭಿಪ್ರಾಯಪಟ್ಟರು.
ಈ ಮಧ್ಯೆ ಅಪಘಾತದಲ್ಲಿ ನಾಪತ್ತೆಯಾದವರ ಸಂಬಂಧಿಕರು ಬಾಲೇಶ್ವರ, ಭುವನೇಶ್ವರ ಮತ್ತು ಕಟಕ್‌ನಲ್ಲಿರುವ ಆಸ್ಪತ್ರೆಗಳು ಮತ್ತು ಶವಾಗಾರಗಳಿಗೆ ಎಡತಾಕುವ ಮುನ್ನ ಘಟನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.
ಅಪಘಾತ ಕುರಿತು ತನಿಖೆ ಆರಂಭಿಸಿರುವ ಸಿಬಿಐ ತಂಡವು ಬಹನಾಗಾಕ್ಕೆ ಭೇಟಿ ನೀಡಿದ್ದು, ಅಪಘಾತ ನಡೆದ ಸ್ಥಳವನ್ನು ಪರಿಶೀಲಿಸಿ, ರೈಲ್ವೆ ಸಿಬ್ಬಂದಿಯ ವಿಚಾರಣೆ ನಡೆಸಿತು.
ತ್ರಿವಳಿ ರೈಲು ಅಪಘಾತದ ಬಳಿಕ ಶಾಲಿಮಾರ್- ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಬುಧವಾರ ಪಶ್ಚಿಮ ಬಂಗಾಳದ ಶಾಲಿಮಾರ್ ನಿಲ್ದಾಣದಿಂದ ಚೆನ್ನೈಗೆ ನಿಗದಿತ ಸಮಯಕ್ಕಿಂತ ಐದು ನಿಮಿಷ ತಡವಾಗಿ ತನ್ನ ಸಂಚಾರ ಆರಂಭಿಸಿತು.