ಮುಂಬೈ: 62 ವರ್ಷಗಳ ಬಳಿಕ ದೆಹಲಿ ಮತ್ತು ಮುಂಬೈ ನಗರಗಳಿಗೆ ಒಂದೇ ದಿನ ಮುಂಗಾರು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
1961 ಜೂನ್ 21ರಂದು ಎರಡೂ ನಗರಗಳಿಗೂ ಏಕ ಕಾಲಕ್ಕೆ ಮುಂಗಾರು ಪ್ರವೇಶಿಸಿತ್ತು.
ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ತಾಸುಗಳಲ್ಲಿ ದೆಹಲಿಯ ಸಫ್ದರ್‌ಜಂಗ್‌ನಲ್ಲಿರುವ ಹವಾಮಾನ ಕೇಂದ್ರದಲ್ಲಿ 48.3 ಮಿ.ಮೀ ಮಳೆ ದಾಖಲಾಗಿದೆ. ದಾಸ್ನಾದಲ್ಲಿ 80ಮಿ.ಮೀ., ಜಾಫರ್‌ಪುರ ಮತ್ತು ಲೋಧಿ ರಸ್ತೆಯಲ್ಲಿ 60ಮಿ.ಮೀ ಮಳೆ ಸುರಿದಿದೆ ಎಂದು ಮೂಲಗಳು ವಿವರಿಸಿವೆ.
ಮುಂಬೈ ಮತ್ತು ಅದರ ಉಪನಗರಗಳಲ್ಲಿ ಭಾರಿ ಮಳೆಯಾಗಿದ್ದು ಕೆಲವೆಡೆ ತಗ್ಗಿನ ಪ್ರದೇಶಗಳು ಜಲಾವೃತವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ತಾಸುಗಳಲ್ಲಿ ಮುಂಬೈನ ಕೊಲಬಾದಲ್ಲಿ 86 ಮಿ.ಮೀ.ಮಳೆಯಾಗಿದೆ. ಇದೇ ಅವಧಿಯಲ್ಲಿ ಸಾಂತಾಕ್ರೂಜ್ ಹವಾಮಾನ ಕೇಂದ್ರದಲ್ಲಿ 176.1 ಮಿ.ಮೀ ಮಳೆ ದಾಖಲಾಗಿದೆ ಎಂದಿದ್ದಾರೆ.
ಮುಖ್ಯಮಂತ್ರಿಯಿಂದ ಪರಿಶೀಲನೆ: ಭಾರಿ ಮಳೆಯ ಕಾರಣ ಪ್ರವಾಹ ಉಂಟಾಗುವ ಸಾಧ್ಯತೆ ಇರುವುದರಿಂದ ಮುಂಬೈನ ಮಿಲನ್ ಸುರಂಗ ಮಾರ್ಗದ ಬಳಿಯ ಭೂಗತ ನೀರಿನ ಟ್ಯಾಂಕ್ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಭಾನುವಾರ ಪರಿಶೀಲಿಸಿದ್ದಾರೆ.
ಬಳಿಕ ಮಾತನಾಡಿದ ಅವರು ಭೂಗತ ನೀರಿನ ಟ್ಯಾಂಕ್ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. ಈ ಸುರಂಗ ಮಾರ್ಗದಲ್ಲಿ ಪ್ರತಿ ವರ್ಷವೂ ಮಳೆ ನೀರು ಸಂಗ್ರಹಗೊಳ್ಳುತ್ತದೆ.
ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಮೂರು ಅಂತಸ್ತಿನ ವಸತಿ ಕಟ್ಟಡದ ಭಾಗವೊಂದು ಕುಸಿದಿದ್ದು, ಕಟ್ಟಡದ ಮೂರನೇ ಅಂತಸ್ತಿನಲ್ಲಿದ್ದ ಇಬ್ಬರನ್ನು ರಕ್ಷಿಸಲಾಗಿದೆ. ಇನ್ನಿಬ್ಬರು ಕಟ್ಟಡದೊಳಗೆ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿವಿಧ ರಾಜ್ಯಗಳಿಗೆ ಮುಂಗಾರು: ಮುಂದಿನ ಎರಡು ದಿನಗಳಲ್ಲಿ ಗುಜರಾತ್, ರಾಜಸ್ಥಾನ, ಹರಿಯಾಣ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗಗಳಿಗೂ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.
ಚಾರ್‌ಧಾಮ್ ಯಾತ್ರಿಕರಿಗೆ ಎಚ್ಚರಿಕೆ
ಡೆಹ್ರಾಡೂನ್: ಉತ್ತರಾಖಂಡದ ವಿವಿಧೆಡೆ ಭಾನುವಾರ ಭಾರಿ ಮಳೆಯಾಗಿದ್ದು ಚಾರ್‌ಧಾಮ್ ಯಾತ್ರಿಕರು ಹವಾಮಾನ ಇಲಾಖೆ ನೀಡುವ ಮಾಹಿತಿಯ ಅನ್ವಯ ಯಾತ್ರೆಯನ್ನು ಮುಂದುವರಿಸುವಂತೆ ಸೂಚಿಸಲಾಗಿದೆ.
'ಹವಾಮಾನ ವೈಪರೀತ್ಯವಿದ್ದರೆ ಯಾತ್ರೆಯನ್ನು ನಿಲ್ಲಿಸಿ' ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಯಾತ್ರಿಕರಲ್ಲಿ ಮನವಿ ಮಾಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ.