ಮುಂಬೈ: ಮಹತ್ವದ ಬೆಳವಣಿಗೆಯಲ್ಲಿ ಇಂದು ಭಾರತೀಯ ಷೇರುಮಾರುಕಟ್ಟೆ ದಿನದ ವಹಿವಾಟು ಆರಂಭದಲ್ಲಿಯೇ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ್ದು, ಸೆನ್ಸೆಕ್ಸ್ 63,500 ಅಂಕಗಳ ಗಡಿ ದಾಟಿ ವ್ಯವಹಾರ ನಡೆಸುತ್ತಿದೆ.
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಬುಧವಾರ (ಜೂನ್ 21) ಆರಂಭಿಕ ವಹಿವಾಟಿನಲ್ಲಿ 63,588.31 ಅಂಕಗಳಷ್ಟು ಏರಿಕೆಯೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಬರೊಬ್ಬರಿ 137 ದಿನಗಳ ಬಳಿಕ ಸೆನ್ಸೆಕ್ಸ್ ಗರಿಷ್ಠ ಮಟ್ಟಕ್ಕೇರಿದ್ದು, ಎಚ್ ಡಿಎಫ್ ಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಹೆಚ್ಚಿನ ಪ್ರಮಾಣದಲ್ಲಿ ಖರೀದಿಯಾಗಿರುವುದಾಗಿ ವರದಿ ತಿಳಿಸಿದೆ.
ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ (ಬಿಎಸ್ ಇ) 146 ಅಂಕಗಳಷ್ಟು ಏರಿಕೆಯಾಗಿದ್ದು, 63,588.31 ಅಂಕಗಳಲ್ಲಿ ವಹಿವಾಟು ನಡೆದಿದೆ. ಅದೇ ರೀತಿ ನಿಫ್ಟಿ ಕೂಡಾ 32.10 ಅಂಕಗಳಷ್ಟು ಏರಿಕೆಯೊಂದಿಗೆ 18,848.80 ಅಂಕಗಳಲ್ಲಿ ವಹಿವಾಟು ಮುಂದುವರಿಸಿದೆ.
ಕಳೆದ ವರ್ಷ ಡಿಸೆಂಬರ್ 1ರಂದು ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 63,583.07 ಅಂಕಗಳ ಏರಿಕೆಯೊಂದಿಗೆ ದಾಖಲೆ ಮಟ್ಟ ತಲುಪಿತ್ತು. ಸೆನ್ಸೆಕ್ಸ್, ನಿಫ್ಟಿ ದಾಖಲೆ ಏರಿಕೆಯಿಂದ ಪವರ್ ಗ್ರಿಡ್, ಆಲ್ಟ್ರಾ ಟೆಕ್ ಸಿಮೆಂಟ್, ಎಚ್ ಡಿಎಫ್ ಸಿ ಬ್ಯಾಂಕ್, ವಿಪ್ರೋ, ಎಚ್ ಡಿಎಫ್ ಸಿ, ಹಿಂದೂಸ್ತಾನ್ ಯೂನಿಲಿವರ್, ಎಲ್ ಟೆಕ್ ಮಹೀಂದ್ರ, ಬಜಾಜ್ ಫಿನ್ ಸರ್ವ್, ಟೈಟಾನ್, ಟಿಸಿಎಸ್ ಮತ್ತು ರಿಲಯನ್ಸ್ ಷೇರುಗಳು ಲಾಭಗಳಿಸಿವೆ.
ಮತ್ತೊಂದೆಡೆ ಟಾಟಾ ಸ್ಟೀಲ್, ಎನ್ ಟಿಪಿಸಿ, ಟಾಟಾ ಮೋಟಾರ್ಸ್, ಐಸಿಐಸಿಐ ಬ್ಯಾಂಕ್ ಹಾಗೂ ಏಷಿಯನ್ ಪೇಂಟ್ಸ್ ಷೇರುಗಳು ನಷ್ಟ ಕಂಡಿದೆ. ಸಿಯೋಲ್, ಶಾಂಘೈ, ಹಾಂಗ್ ಕಾಂಗ್ ಷೇರುಪೇಟೆ ಸಾಧಾರಣ ವಹಿವಾಟಿನೊಂದಿಗೆ ಆರಂಭಗೊಂಡಿದೆ.