ನವದೆಹಲಿ: ಬಿಪೊರ್ಜಾಯ್ ಚಂಡಮಾರುತದ ಅಬ್ಬರದ ಹಿನ್ನೆಲೆಯಲ್ಲಿ ಪಶ್ಚಿಮ ರೈಲ್ವೆಯ 69 ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದ್ದು, 33 ರೈಲುಗಳ ಸಂಚಾರದ ಮಾರ್ಗವನ್ನು ಮಿತಿಗೊಳಿಸಲಾಗಿದೆ ಎಂದು ಪಶ್ಚಿಮ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ( ಸಿಪಿಆರ್ಒ) ತಿಳಿಸಿದ್ದಾರೆ ಎಂದು ಎಎನ್ಐ ಟ್ವೀಟಿಸಿದೆ.

ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಗುರುವಾರ(ಜೂನ್ 15) ಚಂಡಮಾರುತವು ಗುಜರಾತ್ಗೆ ಅಪ್ಪಳಿಸುವ ಸಾಧ್ಯತೆ ಇದ್ದು, ಪರಿಸ್ಥಿತಿ ನಿರ್ವಹಣೆಗೆ ಬೇಕಾದ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್ಡಿಆರ್ಎಫ್) ತಿಳಿಸಿದೆ.
'ಜೂನ್ 15ರ ಸಂಜೆ ಚಂಡಮಾರುತವು ಗುಜರಾತ್ಗೆ ಅಪ್ಪಳಿಸುವ ಸಾಧ್ಯತೆ ಇದ್ದು, ಎನ್ಡಿಆರ್ಎಫ್ನ 18 ಮತ್ತು ಎಸ್ಡಿಆರ್ಎಫ್ನ 13 ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. 45,000 ಮಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಎಲ್ಲ ಸವಾಲು ಎದುರಿಸಲು ನಾವು ಸಜ್ಜಾಗಿದ್ದೇವೆ'ಎಂದು ಎನ್ಡಿಆರ್ಎಫ್ ಡಿಜಿ ಅತುಲ್ ಕರ್ವಾಲ್ ಹೇಳಿದ್ದಾರೆ.
ಪರಿಸ್ಥಿತಿ ನಿಭಾಯಿಸಲು ನಮ್ಮ ಕಾರ್ಯಾಚರಣಾ ತಂಡಗಳನ್ನು ನಿಯೋಜಿಸಲಾಗಿದ್ದು, 24 ಗಂಟೆ ಕಂಟ್ರೋಲ್ ರೂಮ್ ಸಕ್ರಿಯವಾಗಿರಲಿದೆ. ಚಂಡಮಾರುತ ಅಪ್ಪಳಿಸಿದ ಬಳಿಕ ಪರಿಸ್ಥಿತಿಯ ಬಗ್ಗೆ ಮತ್ತೆ ಅವಲೋಕನ ಮಾಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಸೌರಾಷ್ಟ್ರ ಮತ್ತು ಕಛ್ ಪ್ರದೇಶಗಳಲ್ಲಿ ಶುಕ್ರವಾರದವರೆಗೆ ಭಾರಿ ಮಳೆಯಾಗುವ ಕುರಿತಂತೆ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುನ್ಸೂಚನೆ ನೀಡಿದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.