ಮುಂಬೈ: 2000 ರೂ ಮುಖಬೆಲೆಯ ನೋಟುಗಳನ್ನು ವಾಪಸ್ ಪಡೆದ ಬಳಿಕ ಈ ವರೆಗೂ ಶೇ.72ರಷ್ಚು ನೋಟುಗಳು ಬ್ಯಾಂಕಿಗೆ ವಾಪಸ್ ಆಗಿದ್ದು, ನೋಟು ವಾಪಸಾತಿಯಿಂದ ಆರ್ಥಿಕತೆ ಮೇಲೆ ಪರಿಣಾಮ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಭಾರತದ ಆರ್ಥಿಕತೆ ಅನಿಶ್ಚಿತತೆಯ ಸವಾಲುಗಳನ್ನು ಎದುರಿಸುತ್ತಿದೆ. ನಮ್ಮ ಮುಂದೆ 2-3 ಸವಾಲುಗಳಿವೆ. ಮೊದಲನೆಯದು ಅಂತಾರಾಷ್ಟ್ರೀಯ ಅನಿಶ್ಚಿತತೆ, ಎರಡನೆಯದು ಎಲ್ನಿನೋ ಚಂಡಮಾರುತದ ಮುನ್ಸೂಚನೆ ಮತ್ತು ಇತರ ಮುಖ್ಯವಾಗಿ ಹವಮಾನ ಸಂಬಂಧಿತ ಅನಿಶ್ಚಿತತೆಯ ಸವಾಲುಗಳು ದೇಶದ ಆರ್ಥಿಕ ಪರಿಸ್ಥಿತಿಯ ಮುಂದಿವೆ ಎಂದು ಅವರು ಹೇಳಿದರು. ಅಲ್ಲದೆ ಹಣ ದುಬ್ಬರವನ್ನು ಶೇ.4ಕ್ಕೆ ಇಳಿಸಲು ಶ್ರಮಿಸುತ್ತಿದ್ದೇವೆ. ಆಹಾರ, ಹಣ ದುಬ್ಬರಕ್ಕೆ ಎಲ್ನಿನೋ ಮುನ್ಸೂಚನೆ ಸವಾಲಾಗಿದೆ ಎಂದು ಅವರು ಹೇಳಿದರು.
ಭಾರತೀಯ ರಿಸರ್ವ್ ಬ್ಯಾಂಕ್ 2 ಸಾವಿರ ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂತೆಗೆದುಕೊಳ್ಳುವ ತೀರ್ಮಾನ ಮಿನಿ ನೋಟ್ ಅಮಾನೀಕರಣ ಎಂದು ವಿಶ್ಲೇಷಿಸಲಾಗಿತ್ತು. ಇದರಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮಗಳಾಗಬಹುದು ಎಂದು ಹೇಳಲಾಗಿತ್ತು. ಆದರೆ ಶಕ್ತಿಕಾಂತ್ ದಾಸ್ ಅವರು 2 ಸಾವಿರ ಮುಖ ಬೆಲೆಯ ನೋಟುಗಳ ಚಲಾವಣೆಯಿಂದ ಹಿಂತೆಗೆದುಕೊಳ್ಳುವ ತೀರ್ಮಾನದಿಂದ ಆರ್ಥಿಕತೆ ಮೇಲೆ ಪರಿಣಾಮ ಆಗಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ 2016 ನವೆಂಬರ್ 8 ರಂದು ನೋಟುಗಳ ಅಮಾನೀಕರಣ ಮಾಡಿದ ನಂತರ ಹೊಸದಾಗಿ 2 ಸಾವಿರ ರೂ. ಮುಖ ಬೆಲೆಯ ನೋಟುಗಳನ್ನು ಚಲಾವಣೆಗೆ ಬಿಡಲಾಗಿತ್ತು. ಈಗ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ತೀರ್ಮಾನವನ್ನು ರಿಸರ್ವ್ ಬ್ಯಾಂಕ್ ಮಾಡಿದ್ದು, ಸೆ.30 ರವರೆಗೂ ಈ ನೋಟುಗಳು ಚಲಾವಣೆಯಲ್ಲಿರುತ್ತವೆ. ಜನರು ಬ್ಯಾಂಕ್‌ಗಳಲ್ಲಿ 2 ಸಾವಿರ ಮುಖ ಬೆಲೆಯ ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.