ಕಾಸರಗೋಡು: ಜಿಲ್ಲೆಯಲ್ಲಿ ಮುಂಗಾರು ಮಳೆ ಇನ್ನೂ ಬಿರುಸುಗೊಳ್ಳದ ಹಿನ್ನೆಲೆಯಲ್ಲಿ ಬಹುತೇಕ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೇ ಉಳಿದುಕೊಂಡಿದೆ. ಸಾಮಾನ್ಯವಾಗಿ ಕೇರಳಕ್ಕೆ ಜೂ. 1ರಂದು ಮುಂಗಾರು ಪ್ರವೇಶಿಸುತ್ತಿದ್ದರೆ, ಈ ಬಾರಿ ಜೂ. 10ಕ್ಕೆ ಮಳೆ ಆರಂಭಗೊಂಡಿದೆ. ನಂತರದ ದಿನಗಳಲ್ಲಿ ಪ್ರಖರ ಬಿಸಿಲಿನ ಜತೆಗೆ ತುಂತುರು ಮಳೆಯಾಗುತ್ತಿದೆ.
ವಾಡಿಕೆಯಂತೆ ಜೂ. 15ರ ವಏಳೆಗೆ ಜಿಲ್ಲೆಗೆ 489ಮಿ.ಮೀ ಮಳೆ ಲಭಿಸಬೇಕಾಗಿದ್ದು, ಈ ಬಾರಿ 120.7ಮಿ.ಮೀ ಮಾತ್ರ ಮಳೆಯಾಗಿದೆ. ಒಟ್ಟು ಮಳೆ ಪ್ರಮಾಣದಲ್ಲಿ ಶೇ> 74ರಷ್ಟು ಕುಸಿತ ಕಂಡಿರುವುದಾಗಿ ಲೆಕ್ಕಾಚಾರ ತಿಳಿಸಿದೆ. ಕಳೆದ ವರ್ಷ ಕಾಸರಗೋಡು ಜಿಲ್ಲೆಗೆ ಒಟ್ಟು 2755.7ಮಿ.ಮೀ ಮಳೆ ಲಭಿಸಿದೆ. ಕಳೆದ ವರ್ಷ ಸ್ವಾತಿ ಮಳೆ ಹಾಗೂ ಬೇಸಿಗೆ ಮಳೆಯಲ್ಲೂ ಗಣನೀಯ ಕುಸಿತವುಂಟಾಗಿದ್ದು, ವರ್ಷಕಳೆದಂತೆ ಮಳೆ ಪ್ರಮಾಣ ಕಡಿಮೆಯಾಗುತ್ತಾ ಬರುತ್ತಿರುವುದು ಆತಂಕಕ್ಕೂ ಕಾರಣವಾಘುತ್ತಿದೆ. ಈ ಬಾರಿ ಮುಂಗಾರು ಆಗಮನವೇ ವಿಳಂಬವಾಗಿದ್ದು, ನಂತರದ ದಿನಗಳಲ್ಲಿ ಲಭಿಸಬೇಕಾದ ವಾಡಿಕೆ ಮಳೆಯೂ ಲಭ್ಯವಾಗದಿರುವುದರಿಂದ ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗಿದೆ.
ಇಷ್ಟರ ವರೆಗೆ ಸುರಿದ ಮಳೆಯಲ್ಲಿ ತೊರೆ, ಹಳ್ಳಗಳ ಕೊಳೆ ತೊಳೆ ಶುಚೀಕರಣವೂ ನಡೆದಿಲ್ಲ. ಇನ್ನು ಗುಡ್ಡ ಪ್ರದೇಶದಲ್ಲಿ ವಾಸಿಸುತ್ತಿರುವವರ ಕುಡಿಯುವ ನೀರಿನ ಸಮಸ್ಯೆಯೂ ದೂರಾಗಿಲ್ಲ. ಹವಾಮಾನ ಇಲಾಖೆಯ ಮಳೆಸಾಧ್ಯತಾ ಪಟ್ಟಿಯಲ್ಲಿ ಮುಂದಿನ ಐದು ದಿವಸಗಳ ವರೆಗೂ ಕಾಸರಗೋಡು ಜಿಲ್ಲೆಗೆ ಮಳೆಯಾಗುವ ಯಾವುದೇ ಸೂಚನೆಯಿಲ್ಲ.