ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಒಬಿಸಿ ಮತಗಳು 'ಕೈ' ಜಾರದಂತೆ ನೋಡಿಕೊಳ್ಳಲು ಕೇಂದ್ರದ ಬಿಜೆಪಿ ಸರ್ಕಾರವು ಆರು ರಾಜ್ಯಗಳ ಸುಮಾರು 80 ಜಾತಿಗಳನ್ನು ಶೀಘ್ರದಲ್ಲಿ ಕೇಂದ್ರ ಸರ್ಕಾರದ 'ಇತರ ಹಿಂದುಳಿದ ಜಾತಿಗಳ' (ಒಬಿಸಿ) ಪಟ್ಟಿಗೆ ಸೇರ್ಪಡೆ ಮಾಡುವ ಸಾಧ್ಯತೆ ಇದೆ.
ಮಂಡಲ್ ಆಯೋಗ ಸೂಚಿಸಿದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸೂಚಕಗಳ ಆಧಾರದ ಮೇಲೆ ಕೇಂದ್ರದ ಪಟ್ಟಿಗೆ ಸೇರ್ಪಡೆಗಳನ್ನು ಪರಿಗಣಿಸಲಾಗುತ್ತದೆ ಎಂದೂ ಅವರು ಹೇಳಿದರು.
ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು ಈ ಶಿಫಾರಸುಗಳ ಪರಾಮರ್ಶೆ ನಡೆಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಹಿಂದುಳಿದ ವರ್ಗಗಳ ರಾಜ್ಯ ಆಯೋಗ ನಡೆಸುವ ರೀತಿಯಲ್ಲೇ ಕೇಂದ್ರದ ಆಯೋಗವು ಸಹ ವಿಚಾರಣೆ ನಡೆಸಲಿದೆ. ಈ ಪ್ರಕ್ರಿಯೆಗೆ ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ ಎಂದೂ ಮೂಲಗಳು ಹೇಳಿವೆ.
ಲಿಂಗಾಯತರ ಹೋರಾಟ:
ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಗೋವಾದಲ್ಲಿರುವ ವೀರಶೈವ-ಲಿಂಗಾಯತರ 90 ಉಪ ಪಂಗಡಗಳಲ್ಲಿ 16 ಉಪ ಪಂಗಡಗಳು ಮಾತ್ರ ಕೇಂದ್ರ ಪಟ್ಟಿಗೆ ಸೇರ್ಪಡೆಯಾಗಿವೆ. ಎಲ್ಲ ಉಪ ಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಹೋರಾಟಗಳು ಆರಂಭವಾಗಿವೆ.
ಲೋಧಿ, ಲಿಂಗಾಯತ, ಭೋಯರ್, ಪವಾರ್, ಝಾಂಡ್ಸೆ ಸಮುದಾಯಗಳನ್ನು ಕೇಂದ್ರದ ಪಟ್ಟಿಗೆ ಸೇರಿಸುವಂತೆ ಮಹಾರಾಷ್ಟ್ರ ಸರ್ಕಾರ ಕೇಳಿಕೊಂಡಿದೆ. ಪ್ರಸ್ತುತ ರಾಜ್ಯ ಒಬಿಸಿ ಪಟ್ಟಿಯಡಿ ಪಟ್ಟಿ ಮಾಡಿರುವ 40 ಸಮುದಾಯಗಳನ್ನು ಕೇಂದ್ರ ಪಟ್ಟಿಗೆ ಸೇರಿಸಬೇಕು ಎಂದು ತೆಲಂಗಾಣ ಸರ್ಕಾರ ಮನವಿ ಮಾಡಿದೆ. ಮತ್ತೊಂದೆಡೆ, ಆಂಧ್ರ ಪ್ರದೇಶವು ತುರುಪ್ ಕಾಪು ಸಮುದಾಯವನ್ನು ಸೇರಿಸಲು ಕೋರಿದೆ.
ಹಿಮಾಚಲ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ 16 ಸಮುದಾಯಗಳನ್ನು 2014ರ ಬಳಿಕ ಕೇಂದ್ರದ ಪಟ್ಟಿಗೆ ಸೇರಿಸಲಾಗಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವರದಿಯಲ್ಲಿ ತಿಳಿಸಲಾಗಿದೆ. ಈ ವರದಿ ಕಳೆದ ವಾರ ಬಿಡುಗಡೆಯಾಗಿವೆ.