ತಿರುವನಂತಪುರ: ರಾಜ್ಯದಲ್ಲಿ ಮತ್ತೆ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ಪ್ರವೇಶೋತ್ಸವದ ಅಂಗವಾಗಿ ರಾಜ್ಯದಲ್ಲಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ತಿರುವನಂತಪುರಂ ಮಲೈಂಕೀಜ್ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯಮಟ್ಟದ ಪ್ರವೇಶೋತ್ಸವವನ್ನು ಉದ್ಘಾಟಿಸಿದರು. ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳನ್ನು ಭವಿಷ್ಯ ರೂಪಿಸಲು ಶಾಲೆಗಳು ಸಜ್ಜಾಗಿವೆ. ಶಿಕ್ಷಣವು ಮನುಷ್ಯನನ್ನು ಒಳ್ಳೆಯತನದ ಮೂಲವಾಗಿ ಪರಿವರ್ತಿಸುವ ವಿಶೇಷ ವೇದಿಕೆಯಾಗಿದೆ. ಪ್ರತಿಯೊಬ್ಬರೂ ಇತರರನ್ನು ಪ್ರೀತಿಸಲು ಮತ್ತು ಸಹಾಯ ಮಾಡಲು ಸಮರ್ಥರಾಗಿ ಮತ್ತು ಸಿದ್ಧರಿರುವಂತೆ ಬೆಳೆಯಬೇಕು. ಜನರನ್ನು ವಿಭಜಿಸುವ ಸ್ಟೀರಿಯೊಟೈಪ್‍ಗಳನ್ನು ಮೀರುವ ಮೂಲಕ ನಿಮ್ಮ ಸಹಪಾಠಿಗಳನ್ನು ನಿಮ್ಮ ಹೃದಯಕ್ಕೆ ಹತ್ತಿರವಾಗಿಟ್ಟುಕೊಳ್ಳಿ. ಪ್ರಶ್ನೆಗಳನ್ನು ಕೇಳುವ ಮೂಲಕ ಮತ್ತು ಉತ್ತರಗಳನ್ನು ಹುಡುಕುವ ಮೂಲಕ ಮುಂದುವರಿಯಿರಿ. ನಿಮ್ಮ ಮೂಲಕ ಕೇರಳ ಬೆಳಗಲಿ ಎಂದು ಮುಖ್ಯಮಂತ್ರಿ ಹಾರೈಸಿದರು.
ಪ್ರವೇಶೋತ್ಸವ ಹಾಡಿನ ವಿಡಿಯೋವನ್ನು ಶಿಕ್ಷಣ ಸಚಿವ ವಿ.ಶಿವನ್‍ಕುಟ್ಟಿ ಬಿಡುಗಡೆ ಮಾಡಿದರು. ಪ್ರವೇಶೋತ್ಸವದ ಉದ್ಘಾಟನಾ ಸಮಾರಂಭವನ್ನು ಕೈಟ್ ವಿಕ್ಟರ್ಸ್ ಚಾನೆಲ್ ಮೂಲಕ ಎಲ್ಲಾ ಶಾಲೆಗಳಲ್ಲಿ ನೇರ ಪ್ರಸಾರ ಮಾಡಲಾಯಿತು.
ರಾಜ್ಯದಲ್ಲಿ ಹದಿಮೂರು ಸಾವಿರದ ಒಂಬೈನೂರ ಅರವತ್ನಾಲ್ಕು ಶಾಲೆಗಳು ಸರ್ಕಾರಿ ಮತ್ತು ಅನುದಾನಿತ ವರ್ಗಗಳ ಅಡಿಯಲ್ಲಿವೆ. ಅನುದಾನ ರಹಿತ ಶಾಲೆಗಳಲ್ಲೂ ಪ್ರವೇಶೋತ್ಸವ ಆಯೋಜಿಸಲಾಗಿತ್ತು. ಈ ವರ್ಷ ಸುಮಾರು ಮೂರು ಲಕ್ಷ ಮಕ್ಕಳು ಒಂದನೇ ತರಗತಿಗೆ ಸೇರ್ಪಡೆಗೊಂಡಿರುವರೆಂಬುದು ಪ್ರಾಥಮಿಕ ವರದಿ.