ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪೈವಳಿಕೆ ಸನಿಹದ ಕೊಮ್ಮಂಗಳದ ಕಳಾಯಿ ನಿವಾಸಿ ದಿ. ನಾರಾಯಣ ನೋಂಡ ಅವರ ಪುತ್ರ ಪ್ರಭಾಕರ ನೋಂಡ(42)ಅವರ ಮೃತದೇಹ ಮನೆ ಸನಿಹದ ಶೆಡ್ಡಿನಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಇವರನ್ನು ಕೊಲೆಗೈದಿರಬೇಕೆಂದು ಸಂಶಯಿಸಲಾಗಿದೆ.
ಪ್ರಭಾಕರ ನೋಂಡ ಅವರು ಪ್ರತಿದಿನ ರಾತ್ರಿ ವೇಳೆ ಮನೆಗೆ ಹೋಂದಿಕೊಂಡಿರುವ ಕೊಟ್ಟಿಗೆಯಲ್ಲಿ ಮಲಗುತ್ತಿದ್ದರು. ಶುಕ್ರವಾರ ರಾತ್ರಿಯೂ ಆಹಾರ ಸೇವಿಸಿ ಮಲಗಲು ತೆರಳಿದ್ದರು. ಶನಿವಾರ ಬೆಳಗ್ಗೆ ತಾಯಿ ಬೇಬಿ ಅವರು ಚಹಾ ಕುಡಿಯಲು ಪುತ್ರನನ್ನು ಕರೆಯಲು ತೆರಳಿದಾಗ ಯಾವುದೇ ಪ್ರತಿಕ್ರಿಯೆ ಕಂಡುಬಂದಿರಲಿಲ್ಲ. ಇದರಿಂದ ಕೊಟ್ಟಿಗೆಯ ಮಹಡಿಯೇರಿ ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಈ ಬಗ್ಗೆ ತಾಯಿ ಬೇಬಿ ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದಾಗ ಶರೀರದಲ್ಲಿ ಹಲವು ಇರಿತದ ಗಾಯ ಕಂಡುಬಂದಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ, ಡಿವೈಎಸ್‍ಪಿ ಸಿ.ಕೆ ಸುಧಾಕರನ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಪ್ರಭಾಕರ ನೋಂಡ ಅವರನ್ನು ಇರಿದು ಕೊಲೆಗೈದಿರುವುದು ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿದೆ. ಈ ಮಧ್ಯೆ ಪ್ರಭಾಕರ ನೋಂಡ ಅವರ ಸಹೋದರ ಜಯರಾಮ ನೋಂಡ ನಾಪತ್ತೆಯಾಗಿದ್ದು, ಇವರ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಸಂಶಯಕ್ಕೆ ಕಾರಣವಾಗಿದೆ.
ಕೊಲೆ ಪ್ರಕರಣದ ಆರೋಪಿ:
ಪ್ರಭಾಕರ ನೋಂಡ ಅವರು ಕನ್ಯಾನ ನಿವಾಸಿ ಹಾಸಿಫ್ ಎಂಬವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಅಲ್ಲದೆ ಕಳವು, ಮದ್ಯ ಸಾಗಾಟ ಪ್ರಕರಣದಲ್ಲೂ ಇವರ ಮೇಲೆ ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ವ್ಯಾಪಕ ಹುಡುಕಾಟ ಆರಂಭಿಸಿದ್ದಾರೆ.