ನವದೆಹಲಿ (PTI): ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಉಲ್ಲೇಖಿಸಿರುವ ಆರು ಪ್ರಕರಣಗಳ ತನಿಖೆಗೆ ಡಿಐಜಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಸಿಬಿಐ ರಚಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರು ಮಣಿಪುರಕ್ಕೆ ಭೇಟಿ ನೀಡಿದ್ದ ವೇಳೆ, ಐದು ಕ್ರಿಮಿನಲ್ ಪಿತೂರಿ ಹಾಗೂ ಒಂದು ಸಾಮಾನ್ಯ ಪಿತೂರಿಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಲಾಗುವುದು ಎಂದು ಘೋಷಿಸಿದ್ದರು.
ಈ ಕುರಿತು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಮನವಿ ಬಂದ ಬಳಿಕ, ಸಿಬಿಐ ತನಿಖೆ ಕೈಗೆತ್ತಿಕೊಂಡಿದ್ದು, ಎಸ್‌ಐಟಿ ರಚಿಸಿದೆ ಎಂದು ಅವರು ಹೇಳಿದ್ದಾರೆ.
ತುರ್ತು ವಿಚಾರಣೆ ನಿರಾಕರಿಸಿದ 'ಸುಪ್ರೀಂ':
ಗಲಭೆಪೀಡಿತ ಮಣಿಪುರದಲ್ಲಿ ಪದೇ ಪದೇ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸುವುದನ್ನು ಪ್ರಶ್ನಿಸಿ ಮಣಿಪುರದ ಇಬ್ಬರು ನಿವಾಸಿಗಳು ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
'ಈಗಾಗಲೇ ಹೈಕೋರ್ಟ್‌ನಲ್ಲಿ ಈ ಕುರಿತ ಅರ್ಜಿಗಳ ವಿಚಾರಣೆ ನಡೆಯುತ್ತಿವೆಯಲ್ಲ. ಮತ್ತೊಮ್ಮೆ ಪ್ರಕ್ರಿಯೆ ನಡೆಸುವ ಅಗತ್ಯವೇನಿದೆ' ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಹಾಗೂ ರಾಜೇಶ್ ಬಿಂದಲ್ ಅವರಿದ್ದ ರಜಾಕಾಲದ ಪೀಠ ಪ್ರಶ್ನಿಸಿತು. ಅಗತ್ಯವಿದ್ದರೆ ಈ ಕುರಿತು 'ರೆಗ್ಯುಲರ್' ಪೀಠದ ಮುಂದೆ ಪ್ರಸ್ತಾಪಿಸಿ ಎಂದು ಪೀಠ ತಿಳಿಸಿತು.
ಶಸ್ತ್ರಾಸ್ತ್ರಗಳ ವಶ (ಕೋಲ್ಕತ್ತ ವರದಿ): ಮಣಿಪುರದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿರುವ ಭದ್ರತಾ ಪಡೆಗಳು ಶುಕ್ರವಾರ ವಿವಿಧ ಬಗೆಯ 35 ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಕೆಲವೆಡೆ ಶಸ್ತ್ರಾಸ್ತ್ರ ಕೋಟಿಗಳನ್ನು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.