ಕಾಸರಗೋಡು: ಸಂಚಾರಿ ಕಾನೂನು ಉಲ್ಲಂಘಿಸುವವರನ್ನು ಪತ್ತೆಹಚ್ಚಲು ರಸ್ತೆಬದಿ ಅಳವಡಿಸಿರುವ ಎಐ ಕ್ಯಾಮರಾ ಪತ್ತೆಹಚ್ಚುವ ಸಾರಿಗೆ ಉಲ್ಲಂಘನೆಯ ದಂಡದ ಮೊತ್ತವನ್ನು ಆನ್‍ಲೈನ್ ಮೂಲಕವೇ ಪಾವತಿಸಬೇಕಾಗಿದೆ. ಸಾರಿಗೆ ಇಲಾಖೆಯ 'ಇ-ಚಲನ್ ಡಾಟ್ ಪರಿವಾಹನ್'ಸೈಟ್ ಅಥವಾ ಅಕ್ಷಯ ಕೇಂದ್ರಗಳ ಮೂಲಕ ದಂಡದ ಮೊತ್ತ ಪಾವತಿಸಬೇಕು. ಈ ಬಗ್ಗೆ ಮಾಹಿತಿ ಇಲ್ಲದ ಕೆಲವು ಚಾಲಕರು ನೇರ ಪ್ರದೇಶಿಕ ಸಾರಿಗೆ ಕಚೇರಿಗೆ ತೆರಳಿ ದಂಡ ಪಾವತಿಸಲು ಮುಂದಾಗುತ್ತಾರೆ. ಕಾನೂನು ಉಲ್ಲಂಘಿಸಿ ಸಾಗುವ ವಾಹನಗಳ ದೃಶ್ಯಾವಳಿ ಎಐ ಕ್ಯಾಮರಾದಲ್ಲಿ ದಾಖಲಾಗುತ್ತಿದ್ದು, ಇದರ ಆಧಾರದಲ್ಲಿ ಈ ವಾಹನಗಳ ಮಾಲಿಕರು ನೋಂದಾವಣೆ ಸಂದರ್ಭ ನೀಡಿದ ಮೊಬೈಲ್ ನಂಬರ್‍ಗೆ ಸಂದೇಶ ರವಾನೆಯಾಗುತ್ತದೆ. ಜತೆಗೆ ವಾಹನ ಮಾಲಿಕರಿಗೆ ನೋಟೀಸೂ ರವಾನೆಯಾಗುತ್ತದೆ. ದಂಡದ ಮೊತ್ತ ಪಾವತಿಗೆ ಒಂದು ತಿಂಗಳ ಕಾಲಾವಕಾಶವಿದ್ದು, ಈ ಬಗ್ಗೆ ದೂರುಗಳಿದ್ದಲ್ಲಿ 15ದಿವಸದೊಳಗೆ ಪ್ರದೇಶಿಕ ಸಾರಿಗೆ ಕಚೇರಿಯ ಎನ್‍ಫೋರ್ಸ್‍ಮೆಂಟ್ ಕಚೇರಿಗೆ ಸಲ್ಲಿಸಬೇಕಾಗಿದೆ.
ಎ.ಐ ಕ್ಯಾಮರಾ ದೃಶ್ಯಾವಳಿ ತಿರುವನಂತಪುರದ ಡಾಟಾ ಸೆಂಟರ್‍ನಲ್ಲಿ ದಾಖಲಾಗುತ್ತದೆ. ಅಲ್ಲಿ ಇದರ ಯಾದಿ ತಯಾರಿಸಿ, ಇದನ್ನು ಆಯಾ ಜಿಲ್ಲಾ ಕಮಟ್ರೋಲ್ ರಊಮ್‍ಗೆ ರವಾಣಿಸಲಾಗುತ್ತದೆ. ಇದನ್ನು ನ್ಯಾಶನಲ್ ಇನ್‍ಫಾರ್ಮೇಟಿಕ್ ಸೆಂಟರ್(ಎನ್‍ಐಸಿ)ಗೆ ಹಸ್ತಾಂತರಿಸಿ ಇದರ ಆಧಾರದಲ್ಲಿ ಇ-ಚಲನ್‍ಗೆ ರೂಪುನೀಡಲಾಗುತ್ತದೆ.