ಗುವಾಹಟಿ :ಮಣಿಪುರ ಕಳೆದ 58 ದಿನಗಳಿಂದ ಹಿಂಸಾಚಾರದ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದೆ. ಹಿಂಸಾಚಾರ ನಿಲ್ಲದಿದ್ದರೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡುವಂತೆ ಎಲ್ಲಾ ವಿರೋಧ ಪಕ್ಷಗಳು ಒತ್ತಡ ಹೇರುತ್ತಿವೆ. ಈ ಮಧ್ಯೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಮಧ್ಯಾಹ್ನ 3 ಗಂಟೆಗೆ ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅವರನ್ನು ಭೇಟಿ ಮಾಡಿ ರಾಜಿನಾಮೆ ನೀಡಲಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಸುಮಾರು ಎರಡು ತಿಂಗಳ ಕಾಲ ಅಶಾಂತಿ ನೆಲೆಸಿದ್ದು, ರಾಜ್ಯದಲ್ಲಿ ಶಾಂತಿ ನೆಲೆಸುವಲ್ಲಿ ವಿಫಲರಾಗಿರುವ ಅವರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಣಿಪುರಕ್ಕೆ ಭೇಟಿ ನೀಡಿದ ಎರಡನೇ ದಿನದಂದು ರಾಜ್ಯಪಾಲರನ್ನು ಭೇಟಿಯಾದರು. ಮಣಿಪುರದ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಮಣಿಪುರದಲ್ಲಿ ಶಾಂತಿ ನೆಲೆಸುವ ಅಗತ್ಯವಿದೆ ಎಂದು ಹೇಳಿದರು.
ಬಿರೇನ್ ಸಿಂಗ್ ಮೂರು ಗಂಟೆಗೆ ರಾಜ್ಯಪಾಲರನ್ನು ಭೇಟಿ ಸಾಧ್ಯತೆ!
ಮಣಿಪುರದ ಇತ್ತೀಚಿನ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಇಂದು ಮಧ್ಯಾಹ್ನ 1 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಬೇಕಿತ್ತು. ಆದರೆ ಇದೀಗ ಎನ್ ಬಿರೇನ್ ಸಿಂಗ್ ಅವರು ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿ ಬರುತ್ತಿದೆ. ವರದಿಯ ಪ್ರಕಾರ, ಬಿರೇನ್ ಸಿಂಗ್ ಅವರಿಗೆ ರಾಜೀನಾಮೆ ನೀಡಲು ಅಥವಾ ಕೇಂದ್ರವು ಮಧ್ಯಪ್ರವೇಶಿಸಿ ಅಧಿಕಾರ ವಹಿಸಿಕೊಳ್ಳುವ ಆಯ್ಕೆಯನ್ನು ನೀಡಲಾಯಿತು. ಇದಾದ ನಂತರ ಮುಖ್ಯಮಂತ್ರಿಗೆ ರಾಜೀನಾಮೆ ನೀಡದೆ ಬೇರೆ ದಾರಿಯೇ ಇಲ್ಲದಂತಾಗಿದೆ.
ಮೇ 3ರಿಂದ ಹಿಂಸಾಚಾರ
ಮಣಿಪುರದಲ್ಲಿ ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಮೇ 3ರಂದು ಬುಡಕಟ್ಟು ಕುಕ್ಕಿ ಸಮುದಾಯ ಮೆರವಣಿಗೆಯನ್ನು ಆಯೋಜಿಸಿತ್ತು. ಅದರ ನಂತರ ಹಿಂಸಾಚಾರ ಪ್ರಾರಂಭವಾಯಿತು. ರಾಜ್ಯದ ಜನಸಂಖ್ಯೆಯ ಶೇಕಡಾ 53ರಷ್ಟಿರುವ ಮೈತೇಯಿ ಸಮುದಾಯವು ಮುಖ್ಯವಾಗಿ ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದೆ. ಅದೇ ಸಮಯದಲ್ಲಿ, ನಾಗಾ ಮತ್ತು ಕುಕಿಯಂತಹ ಬುಡಕಟ್ಟು ಸಮುದಾಯಗಳು ಜನಸಂಖ್ಯೆಯ ಶೇಕಡಾ 40 ರಷ್ಟಿದೆ ಮತ್ತು ಮುಖ್ಯವಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.