ನವದೆಹಲಿ: ಗೋಧಿಯ ಬೆಲೆ ಏರಿಕೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಬೆಲೆಗಳನ್ನು ತಗ್ಗಿಸಲು ಸರಕುಗಳ ಮೇಲಿನ ಆಮದು ಸುಂಕ ಕಡಿಮೆ ಮಾಡುವ ಸೂಚನೆ ನೀಡಿದೆ.
ಗೋಧಿ ಬೆಲೆ ಕಡಿಮೆ ಮಾಡಲು ಹಲವಾರು ಆಯ್ಕೆಗಳಿವೆ ಮತ್ತು ಅಗತ್ಯ ಬಿದ್ದರೆ ಗೋಧಿ ಮೇಲಿನ ಆಮದು ಸುಂಕವನ್ನು ಸಹ ಕಡಿಮೆ ಮಾಡಬಹುದು ಎಂದು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ(ಎಫ್‌ಸಿಐ) ಅಧ್ಯಕ್ಷ ಅಶೋಕ್ ಮೀನಾ ಅವರು ಹೇಳಿದ್ದಾರೆ.
ಪ್ರಸ್ತುತ ಗೋಧಿಯ ಮೇಲೆ ಶೇಕಡಾ 40 ರಷ್ಟು ಆಮದು ಸುಂಕ ವಿಧಿಸಲಾಗುತ್ತಿದೆ.
ಗೋಧಿ ಬೆಲೆಗಳನ್ನು ನಿಯಂತ್ರಿಸಲು ಎಫ್‌ಸಿಐ ಗೋಧಿ ಮತ್ತು ಅಕ್ಕಿಯ ಇ-ಹರಾಜು ನಡೆಸಲಿದೆ. 457 ಡಿಪೋಗಳಿಂದ ಸುಮಾರು 4 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಇ-ಹರಾಜು ಮೂಲಕ ನೀಡಲಾಗುವುದು ಮತ್ತು ಈ ಸಂಬಂಧ ಶುಕ್ರವಾರ ಮಧ್ಯರಾತ್ರಿಯೊಳಗೆ ಟೆಂಡರ್ ಕರೆಯಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಎಫ್‌ಸಿಐ ಗೋಧಿಯ ಮೀಸಲು ಬೆಲೆ ಪ್ರತಿ ಕ್ವಿಂಟಲ್‌ಗೆ 2,150 ರೂ. ಇದ್ದು, ಒಬ್ಬ ಬಿಡ್ದುದಾರ 100 ಮೆಟ್ರಿಕ್ ಟನ್ ಗೋಧಿಗೆ ಮಾತ್ರ ಬಿಡ್ ಮಾಡಬಹುದು ಎಂದು ಮೀನಾ ಅವರು ತಿಳಿಸಿದ್ದಾರೆ.
ಜೂನ್ 7 ರಂದು, ಗೋಧಿ ಪ್ರತಿ ಕ್ವಿಂಟಲ್‌ಗೆ 2,302 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಜೂನ್ 12 ರಂದು ದಾಸ್ತಾನು ಮಿತಿಯನ್ನು ವಿಧಿಸಿದ ನಂತರ, ಅದರ ಬೆಲೆ ಶೇಕಡಾ 2 ರಷ್ಟು ಕಡಿಮೆಯಾಗಿತ್ತು.
ಜೂನ್ 14 ರಂದು, ಗೋಧಿ ಪ್ರತಿ ಕ್ವಿಂಟಲ್‌ಗೆ 2,268 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಜೂನ್ 22 ರಂದು ಅದರ ಬೆಲೆ ಕ್ವಿಂಟಲ್‌ಗೆ 2,340 ರೂ.ಗೆ ಏರಿಕೆಯಾಗಿದೆ.