ಶ್ರೀನಗರ: ಇಲ್ಲಿನ ಪ್ರತಾಪ್ ಉದ್ಯಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 'ಹುತಾತ್ಮರ ಸ್ಮಾರಕ'ಕ್ಕೆ (ಬಲಿದಾನ್ ಸ್ತಂಭ್) ಶನಿವಾರ ಶಂಕುಸ್ಥಾಪನೆ ನೇರವೇರಿಸಿದರು.
'ಶ್ರೀನಗರ ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ಹುತಾತ್ಮರ ಸ್ಮಾರಕ ನಿರ್ಮಿಸಲಾಗುತ್ತಿದ್ದು, ಇದು ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮರಿಗೆ ಸಲ್ಲಿಸುವ ಗೌರವವಾಗಿದೆ' ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಶಾ ಅವರು ಜುಲೈ 1ರಿಂದ ಪ್ರಾರಂಭವಾಗಲಿರುವ ಅಮರನಾಥ ಯಾತ್ರೆಯ ಸಿದ್ಧತೆಗಳ ಪರಿಶೀಲನೆಗಾಗಿ ಬಾಲ್‌ಟಾಲ್‌ಗೆ ಭೇಟಿ ನೀಡಿದರು.
ಶುಕ್ರವಾರ ಸಂಜೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದ ಶಾ, 'ವಿತಾಸ್ತ ಉತ್ಸವ'ವನ್ನೂ ಉದ್ಘಾಟಿಸಿದರು. ಸಂಜೆ ನಗರದಲ್ಲಿ ನಡೆದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾ ಅವರಿಗೆ ಅಮರನಾಥ ಯಾತ್ರೆಗೆ ಜಾರಿಯಲ್ಲಿರುವ ಭದ್ರತಾ ಪರಿಸ್ಥಿತಿ ಮತ್ತು ಭದ್ರತಾ ಯೋಜನೆಗಳ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.
ಅಮರನಾಥ ಯಾತ್ರೆಗೆ ಬರುವ ಯಾತ್ರಾರ್ಥಿಗಳಿಗೆ ಮೇಘಸ್ಫೋಟದಂಥ ನೈಸರ್ಗಿಕ ವಿಕೋಪಗಳ ಸಂದರ್ಭಗಳಲ್ಲಿ ರಕ್ಷಣೆ ಒದಗಿಸಲು ತ್ವರಿತ ಪ್ರತಿಕ್ರಿಯೆ ತಂಡಗಳಿಗೆ (ಕ್ಯುಆರ್‌ಟಿ) ಶಾ ಅವರು ನಿರ್ದೇಶನ ನೀಡಿದರು.
ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು, ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ತೊಡಗಿಕೊಂಡಿರುವ ಭದ್ರತಾ ಪಡೆಗಳ ಕಾರ್ಯಗಳನ್ನು ಅಮಿತ್ ಶಾ ಶ್ಲಾಘಿಸಿದರು ಎಂದು ಮೂಲಗಳು ತಿಳಿಸಿವೆ.