ಮಶ್ರೂಮ್ ಕರಿ, ಮಶ್ರೂಮ್ ಬಿರಿಯಾನಿ, ಮಶ್ರೂಮ್ ಚಿಲ್ಲಿ ಹೀಗೆ ಮಶ್ರೂಮ್ ಸ್ಪೆಷಲ್ ಆಹಾರಗಳ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುವುದು ಅಲ್ವಾ? ಆದರೆ ಈ ಅಣಬೆ ಮಳೆಗಾಲದಲ್ಲಿ ತಿನ್ನುವುದು ಸುರಕ್ಷಿತವೇ? ಎಂಬುವುದು ಬಹುತೇಕರ ಪ್ರಶ್ನೆಯಾಗಿದೆ. ಅಲ್ಲದೆ ಭೂಮಿ ತಂಪಾದಾಗ ತೋಟಗಳಲ್ಲಿ ಅಣಬೆ ಏಳಲಾರಂಭಿಸುತ್ತದೆ. ಅಣಬೆ ತಿಂದು ಅಶ್ವಸ್ಥರಾದ ಪ್ರಕರಣ ಕೇಳುವಾಗ ಅಣಬೆ ಮಳೆಗಾಲದಲ್ಲಿ ಸುರಕ್ಷಿತವೇ ಎಂಬ ಪ್ರಶ್ನೆ ಮೂಡುವುದು ಅಲ್ವಾ? ಇದರ ಕುರಿತು ಸವಿವರವಾಗಿ ಹೇಳುವುದಾದರೆ....
ಮಳೆಗಾಲದಲ್ಲಿ ಅಣಬೆ ತಿನ್ನಬಹುದೇ?
ಸೀಸನಲ್ ಆಹಾರ ಆರೋಗ್ಯಕ್ಕೆ ಒಳ್ಳೆಯದು ಎಂಬ ಅಂಶ ಗೊತ್ತೇ ಇದೆ. ಅಣಬೆ ನಿಮಗೆ ಮಳೆಗಾಲದಲ್ಲಿಯೇ ಸಿಗುವುದು (ನೈಸರ್ಗಿಕವಾಗಿ ಸಿಗುವಂಥದ್ದು). ಮಳೆ ಬಂದು ಭೂಮಿ ತಂಪಾದಾಗ ಅಣಬೆ ಏಳಲಾರಂಭಿಸುತ್ತದೆ. ಬಗೆ ಬಗೆಯ ಅಣಬೆಗಳು ಏಳಲಾರಂಭಿಸುತ್ತದೆ. ಎಲ್ಲಾ ಬಗೆಯ ಅಣಬೆಗಳು ತಿನ್ನಲು ಯೋಗ್ಯವಲ್ಲ, ಇದರ ಬಗ್ಗೆ ಜ್ಞಾನ ಇರಬೇಕು. ಕೆಲವೊಂದು ಅಣಬೆಗಳು ನೋಡಲು ತಿನ್ನುವ ಅಣಬೆಯಂತೆಯೇ ಇರುತ್ತದೆ, ಆದರೆ ಅವುಗಳು ವಿಷಕಾರಿಯಾಗಿರುತ್ತೆ. ಅಣಬೆ ಭೂಮಿ ಮೇಲೆ ಮಾತ್ರವಲ್ಲ ಕುಂಬಾದ ಮರದಲ್ಲಿ, ಹುತ್ತದಲ್ಲಿ ಏಳುವುದು. ಇನ್ನು ಅಣಬೆ ಶುದ್ಧ ಮಾಡಲು ಕೂಡ ಗೊತ್ತಿರಬೇಕು, ಅದಕ್ಕೆ ಹುಳಾಗುವ ಸಾಧ್ಯತೆ ಹೆಚ್ಚು, ಇವುಗಳ ಬಗ್ಗೆ ಜಾಗ್ರತೆವಹಿಸಬೇಕು.
ಅಣಬೆಯನ್ನು ಸರಿಯಾಗಿ ಬೇಯಿಸಬೇಕು
ಅಣಬೆಯನ್ನು ಸರಿಯಾಗಿ ಬೇಯಿಸಬೇಕು. ಇಲ್ಲದಿದ್ದರೆ ಅನಾರೋಗ್ಯ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಅಣಬೆ ಅಡುಗೆ ಮಾಡುವಾಗ ಕೊಳೆಯುವ ಹಂತದಲ್ಲಿರುವ ಅಣಬೆ ಬಳಸಬೇಡಿ, ಅದರಲ್ಲಿ ಬ್ಯಾಕ್ಟಿರಿಯಾಗಳು ಇರುತ್ತವೆ. ಆದ್ದರಿಂದ ಅಂಥ ಅಣಬೆಗಳನ್ನು ಸೇವಿಸಬೇಡಿ.
ಬೆಳೆಯುವಂಥ ಅಣಬೆ ತಿನ್ನಬಹುದೇ?
ಮಳೆಗಾಲದಲ್ಲಿ ಅಣಬೆ ಕೃಷಿ ಮಾಡಿ ಬೆಳೆಯುವಂಥ ಅಣಬೆ ತಿನ್ನುವುದರಿಂದ ದೊಡ್ಡ ಸಮಸ್ಯೆಯೇನೂ ಉಂಟಾಗುವುದಿಲ್ಲ. ಇದನ್ನು ಹೆಚ್ಚು ಆತಂಕವಿಲ್ಲದೆ ತಿನ್ನಬಹುದು. ಆದರೆ ಅಣಬೆ ತಂದರೆ ಬೇಗನೆ ಮಾಡಿ, ಕೊಳೆಯುವ ಹಂತದಲ್ಲಿದ್ದಾಗ ಅವುಗಳನ್ನು ಆಹಾರ ಪದಾರ್ಥಗಳಿಗೆ ಬಳಸಬೇಡಿ.
ಅಣಬೆ ತಿನ್ನುವುದರಿಂದ ದೊರೆಯುವ ಪ್ರಯೋಜನಗಳು
* ಅಣಬೆಯಲ್ಲಿ ವಿಟಮಿನ್ ಡಿ ಇದೆ
ಮಳೆಗಾಲದಲ್ಲಿ ಬಿಸಿಲು ಕಡಿಮೆ ಬೀಳುವುದರಿಂದ ವಿಟಮಿನ್ ಡಿ ಕೂಡ ಅಧಿಕ ಸಿಗುವುದಿಲ್ಲ. ಆದರೆ ಅಣಬೆ ತಿನ್ನುವುದರಿಂದ ವಿಟಮಿನ್ ಡಿ ಅದರಲ್ಲಿ ಸಿಗಲಿದೆ.
* ಕ್ಯಾನ್ಸರ್ ಅಪಾಯ ತಡೆಗಟ್ಟುತ್ತದೆ
ಅಣಬೆಯಲ್ಲಿ ಅಮೈನೋ ಆಮ್ಲ, ergothioneine ಅಂಶವಿರುವುದರಿಂದ ಕ್ಯಾನ್ಸರ್ ಅಪಾಯ ತಡೆಗಟ್ಟುವುದು.
ಅತ್ಯಧಿಕ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಅಣಬೆ ತಿನ್ನುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಇರುತ್ತದೆ. ಆದ್ದರಿಂದ ನೀವು ಅಣಬೆ ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುವುದಿಲ್ಲ.
ಅಣಬೆ ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು
ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯದ ಕಡೆಗೆ ತುಂಬಾನೇ ಗಮಹರಿಸಬೇಕು. ಅಣಬೆ ತಿನ್ನುವುದರಿಂದ ಹೊಟ್ಟೆಯ ಆರೋಗ್ಯ ಹೆಚ್ಚಾಗುವುದು. ಅಣಬೆಯಲ್ಲಿ ಪ್ರೀಬಯೋಟಿಕ್ ಇರುವುದರಿಂದ ಹೊಟ್ಟೆಯ ಆರೋಗ್ಯ ವೃದ್ಧಿಸುವುದು.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಅಣಬೆ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಮಳೆಗಾಲದಲ್ಲಿ ಸಾಕಷ್ಟು ಬಿಸಿಲು ಮೈಗೆ ಬೀಳದಿದ್ದಾಗ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು.
ಮಾಂಸಾಹಾರದಲ್ಲಿ ಸಿಗುವ ಪೋಷಕಾಂಶ ಅಣಬೆಯಲ್ಲಿ ಸಿಗುವುದು
ಸಸ್ಯಾಹಾರಿಗಳು ಅಣಬೆಯನ್ನು ತಿಂದರೆ ಮಾಂಸಾಹಾರದಲ್ಲಿ ಸಿಗುವ ಪೋಷಕಾಂಶಗಳು ಸಿಗಲಿದೆ. ಆದರೆ ಹೆಚ್ಚಿನ ಸಸ್ಯಾಹಾರಿಗಳು ಅಣಬೆಯನ್ನು ಸೇವಿಸುವುದಿಲ್ಲ. ಅಣಬೆಯನ್ನು ಸೇವಿಸುವವರಿಗೆ ಇದರಿಂದ ಮಾಂಸಕ್ಕೆ ಸರಿಸಮನಾದ ಪೋಷಕಾಂಶ ಸಿಗಲಿದೆ.
ಮಕ್ಕಳಿಗೆ ಅಣಬೆ ಸೂಪ್ ಮಾಡಿ ಕೊಡಿ
ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೀವು ಮಕ್ಕಳಿಗೆ ಅಣಬೆ ಸೂಪ್ ಮಾಡಿ ಕೊಡಿ, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.