ಕೊಲ್ಲಂ: ತಮ್ಮ ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಯುವ ನಿರ್ದೇಶಕರೋರ್ವರು ಪುಡ್ ಪಾಯ್ಸನ್ ನಿಂದ ಮೃತರಾದ ಘಟನೆ ನಡೆದಿದೆ.
ಚಲನಚಿತ್ರ ನಿರ್ಮಾಣ ನಿಯಂತ್ರಕ ಬೈಜು ಪರವೂರ್ ಅವರು ನಿನ್ನೆ ಬೆಳಿಗ್ಗೆ ಎರ್ನಾಕುಳಂ ಮೆಡಿಕಲ್ ಟ್ರಸ್ಟ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಬರೆದು ನಿರ್ದೇಶಿಸಿದ್ದ ‘ರಹಸ್ಯ’ ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವಾಗಲೇ ಬೈಜು ಅವರ ನಿಧನ ಸಂಭವಿಸಿದೆ.
ಚಿತ್ರದ ಚರ್ಚೆಗೆಂದು ಕೋಝಿಕ್ಕೋಡ್ ಗೆ ಬಂದಿದ್ದ ಬೈಜು ಶನಿವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಹೋಟೆಲ್ ನಲ್ಲಿ ಆಹಾರ ಸೇವಿಸಿದ್ದರು. ಆಹಾರ ಸೇವನೆಯ ಬಳಿಕ ವಾಹನ ಚಲಾಯಿಸುತ್ತಿದ್ದಾಗ ಅಸ್ವಸ್ಥಗೊಂಡಿದ್ದರು. ನಂತರ ಕುನ್ನಂಕುಳಂನಲ್ಲಿರುವ ಪತ್ನಿಯ ಮನೆಗೆ ತೆರಳಿ ಸಮೀಪದ ವೈದ್ಯರನ್ನು ಭೇಟಿಯಾಗಿ ಬಳಿಕ ಪತ್ನಿಯೊಂದಿಗೆ ಉತ್ತರ ಪರವೂರಿನಲ್ಲಿರುವ ತನ್ನ ಮನೆಗೆ ತೆರಳಿದ್ದರು. ಆದರೆ ರಾತ್ರಿಯ ವೇಳೆಗೆ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ. ಅವರು ನಿನ್ನೆ ಬೆಳಿಗ್ಗೆ ನಿಧನರಾದರು.
20 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಬೈಜು ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿಯೂ ಕೆಲಸ ಮಾಡಿದ್ದಾರೆ. ಧನಿಯಂ, ಮೈಥಿಲಿ, ಕೈತೋಳಚಾತನ್ ಸೇರಿದಂತೆ 45ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರೊಡಕ್ಷನ್ ಕಂಟ್ರೋಲರ್ ಆಗಿ ಕೆಲಸ ಮಾಡಿದ್ದಾರೆ.