ಅಮೃತಸರ: ಸಿಖ್ ಗುರುದ್ವಾರಗಳ (ತಿದ್ದುಪಡಿ) ಮಸೂದೆ 2023 ಹಿಂಪಡೆಯದಿದ್ದರೆ ಎಎಪಿ ನೇತೃತ್ವದ ಪಂಜಾಬ್ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ (ಎಸ್‌ಜಿಪಿಸಿ) ಮುಖ್ಯಸ್ಥ ಹರ್ಜಿಂದರ್ ಸಿಂಗ್ ಧಾಮಿ ಸೋಮವಾರ ಎಚ್ಚರಿಸಿದ್ದಾರೆ.
ಅಮೃತಸರದಲ್ಲಿ ಮಸೂದೆ ಜಾರಿಗೆ ತರುವ ಸರ್ಕಾರದ ವಿರುದ್ಧ ನಡೆದ ಎಸ್‌ಜಿಪಿಸಿಯ ವಿಶೇಷ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಧಾಮಿ, ಮುಖ್ಯಮಂತ್ರಿ ಭಗವಂತ್ ಮಾನ್ ಎಸ್‌ಜಿಪಿಸಿ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಮತ್ತು ಎಸ್‌ಜಿಪಿಸಿಯನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಸಿಖ್ ವಿರೋಧಿ ಚಿಂತನೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗೋಲ್ಡನ್ ಟೆಂಪಲ್‌ನಿಂದ ಗುರ್ಬಾನಿಯ ಉಚಿತ ಪ್ರಸಾರದ ಖಾತ್ರಿ ಹೊಂದಿರುವ ಸಿಖ್ ಗುರುದ್ವಾರಗಳ (ತಿದ್ದುಪಡಿ) ಮಸೂದೆ 2023ನ್ನು ಪಂಜಾಬ್ ಅಸೆಂಬ್ಲಿ ಜೂನ್ 20 ರಂದು ಅಂಗೀಕರಿಸಿತು. ಈ ಮಸೂದೆಯನ್ನು ತಕ್ಷಣವೇ ಹಿಂಪಡೆಯಬೇಕೆಂದು ಅವರು ಆಗ್ರಹಿಸಿದರು.
ರಾಜ್ಯ ಸರ್ಕಾರ ಸಿಖ್ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸದಿದ್ದರೆ, ಅಕಾಲ್ ತಖ್ತ್‌ನಲ್ಲಿ ಪ್ರಾರ್ಥನೆ ಮಾಡಿದ ಸರ್ಕಾರದ ವಿರುದ್ಧ ಪ್ರತಿಭಟನೆ ಪ್ರಾರಂಭಿಸಲಾಗುವುದು, ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಿಖ್ ಗುರುದ್ವಾರಗಳ ಕಾಯ್ದೆ1925 ನ್ನು ಸಂಸತ್ತಿನಲ್ಲಿ ಮಾತ್ರ ತಿದ್ದುಪಡಿ ಮಾಡಬಹುದು ಎಂದು ಎಸ್ ಜಿಪಿಸಿ ಪ್ರತಿಪಾದಿಸಿದೆ.