ಭೋಪಾಲ್: ತಮ್ಮ ಗುಂಪಿನ ಹಸುವೊಂದರ ಮೇಲೆ ದಾಳಿ ಮಾಡಿದ್ದ ಹುಲಿಯನ್ನು ಎಲ್ಲಾ ಹಸುಗಳು ಒಗ್ಗೂಡಿ ಹೆದರಿ ಓಡಿಸಿರುವ ಅಪರೂಪದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್ ನ ಕೆರ್ವಾದಲ್ಲಿನ ಫಾರ್ಮ್ ನಲ್ಲಿ ಈ ಘಟನೆ ನಡೆದಿದ್ದು, ಇಡೀ ದೃಶ್ಯ ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಘಟನೆ ಇದೇ ಭಾನುವಾರ ರಾತ್ರಿ ನಡೆದಿದ್ದು, ಅಗು ಹೇಗೋ ಫಾರ್ಮ್ ಹೌಸ್ ನ ಕಾಂಪೌಂಡ್ ಒಳಗೆ ಪ್ರವೇಶ ಮಾಡಿರುವ ಹುಲಿ, ಅಲ್ಲಿಯೇ ಮೇಯುತ್ತಿದ್ದ ಹಸುಗಳ ಗುಂಪಿನತ್ತ ಧಾವಿಸಿದೆ. ಈ ವೇಳೆ ಅಲ್ಲಿಯೇ ಕುಳಿತು ಹಲ್ಲು ಮೇಯುತ್ತಿದ್ದ ಒಂಟಿ ಹಸವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ಅದರ ಕುತ್ತಿಗೆ ಹಿಡಿದಿದೆ.
ಹಸುವಿನ ಚೀರಾಟ ಕೇಳುತ್ತಲೇ ಅಲ್ಲಿಯೇ ಇದ್ದ ಇತರೆ ಹಸುಗಳೆಲ್ಲಾ ಒಗ್ಗೂಡಿ ಹುಲಿಯತ್ತ ಧಾವಿಸಿದೆ. ಹಸುಗಳ ಗುಂಪು ಮತ್ತು ಅವುಗಳ ಕೂಗನ್ನು ಕೇಳಿ ಭಯಗೊಂಡ ಹುಲಿ ಕೊಂಚ ಹೊತ್ತು ಹಸುವನ್ನು ಬಿಡಲಿಲ್ಲವಾದರೂ ಈ ವೇಳೆ ಗುಂಪಿನಲ್ಲಿದ್ದ ಹಸುವೊಂದು ಹುಲಿಗೆ ತಿವಿಯಲು ಮುಂದೆ ಬಂದಿದೆ. ಆಗ ಭಯಗೊಂಡ ಹುಲಿ ಪಕ್ಕಕ್ಕೆ ಹಾರಿ ಹಸುಗಳಿಂದ ದೂರ ಹೋಗಿದೆ. ಈ ವೇಳೆ ಹುಲಿ ಬಾಯಿಗೆ ತುತ್ತಾಗ ಬೇಕಿದ್ದ ಹಸು ಕೂಡಲೇ ಮೇಲೆದ್ದು ಅಲ್ಲಿಂದ ಪಾರಾಗಿದೆ.
ಇತ್ತ ಹಸುಗಳ ಗುಂಪನ್ನು ನೋಡಿದ ಹುಲಿ ಬೇರೆ ದಾರಿ ಇಲ್ಲದೇ ಅಲ್ಲಿಂದ ಹೊರಟು ಹೋಗಿದೆ. ಈ ಇಡೀ ದೃಶ್ಯ ಫಾರ್ಮ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸುಮಾರು 76 ಎಕರೆ ಪ್ರದೇಶದಲ್ಲಿರುವ ಈ ಫಾರ್ಮ್ ನಲ್ಲಿ ಅದರ ಮಾಲೀಕ ಸುಮಾರು 50 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾನೆ. ಈ ಹಸುವಿನ ಫಾರ್ಮ್ ಗೆ ಹುಲಿ ನುಗ್ಗುತ್ತಿರುವುದು ಕಳೆದ 6 ತಿಂಗಳಲ್ಲಿ 5ನೇ ಬಾರಿಯಂತೆ. ಇದು ಹುಲಿಗಳು ಅಡ್ಡಾಡುವ ಪ್ರದೇಶವಾಗಿದ್ದು, 14 ಅಡಿ ಎತ್ತರೆದ ಫೆನ್ಸಿಂಗ್ ಹಾಕಿದ್ದರೂ ಹುಲಿಗಳು ಫಾರ್ಮ್ ಪ್ರವೇಶಿಸುತ್ತಿವೆ. ಕೆಲ ಭಾಗದಲ್ಲಿ ಫೆನ್ಸಿಂಗ್ ಹಾಳಾಗಿದ್ದು ಅವುಗಳನ್ನು ದುರಸ್ತಿ ಮಾಡಬೇಕಿದೆ. ಇಂತಹ ಪ್ರದೇಶಗಳಿಂದಲೇ ಹುಲಿಗಳು ಪ್ರವೇಶ ಮಾಡುತ್ತಿರಬಹುದು ಎಂದು ಮಾಲೀಕರು ಶಂಕಿಸಿದ್ದಾರೆ.